ಉದಯಪುರ(ರಾಜಸ್ಥಾನ):ಮತಾಂಧರಿಂದ ಅತ್ಯಂತ ಭಯಾನಕ ರೀತಿಯಲ್ಲಿ ಹತ್ಯೆಗೀಡಾದ ಟೈಲರ್ ಕನ್ಹಯ್ಯಲಾಲ್ ಅವರ ಪತ್ನಿ ಯಶೋದಾ, ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. "ಇವತ್ತು ನನ್ನ ಗಂಡನ ಕೊಲೆ ಮಾಡಿರುವ ಇವರು, ನಾಳೆ ಇನ್ಯಾರನ್ನೋ ಕೊಲ್ಲುತ್ತಾರೆ" ಎಂದು ಹೇಳುತ್ತಾ ಕಣ್ಣೀರು ಸುರಿಸಿದರು.
ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ನಡೆದ ಟೈಲರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಐಸಿಸ್ ಮಾದರಿಯಲ್ಲಿ ಕನ್ಹಯ್ಯಲಾಲ್ ಹತ್ಯೆ ನಡೆದಿತ್ತು. ಮನೆಯ ಪ್ರಮುಖ ಸದಸ್ಯನನ್ನು ಕಳೆದುಕೊಂಡಿರುವ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಘಟನೆಯ ಬಗ್ಗೆ ಪತ್ನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. "ನನ್ನ ಗಂಡನಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಅಂಗಡಿಗೆ ಬಂದು ಕೈ ಕತ್ತರಿಸುವಂತೆ ಬೆದರಿಸುತ್ತಿದ್ದರು. ಹೀಗಾಗಿ ನಾವು ಸಹ ಮನೆಯಿಂದ ಹೊರಬಂದಿರಲಿಲ್ಲ. ಮಂಗಳವಾರದಂದು ಮನೆಯಿಂದ ಊಟದ ಬಾಕ್ಸ್ ತೆಗೆದುಕೊಂಡು ಅವರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಈ ಕೃತ್ಯ ನಡೆಸಿದ್ದಾರೆ" ಎಂದು ಅವರು ವಿವರಿಸಿದರು.