ಮಥುರಾ: ಉತ್ತರಾಖಂಡದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಸಾಧ್ವಿ ಋತಂಭರ ಅವರ ಸನ್ಯಾಸತ್ವಕ್ಕೆ 60 ವರ್ಷ ಪೂರೈಸಿದ ಸ್ಮರಣಾರ್ಥ ಶನಿವಾರ ವೃಂದಾವನದ ವಾತ್ಸಲ್ಯ ಗ್ರಾಮದಲ್ಲಿ ಆಯೋಜಿಸಿದ್ದ ಷಷ್ಠಿ ಪೂರ್ಣಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಮಸೂದೆಯನ್ನು ಶೀಘ್ರದಲ್ಲಿಯೇ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.
ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ, "ರಾಮ ಭಕ್ತರ" ಮೇಲೆ ಗುಂಡಿನ ದಾಳಿಗೆ ಕಾರಣರಾದವರು ಎಂದಿಗೂ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುತ್ತಿರಲಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಗೊಳಿಸುತ್ತಿರಲಿಲ್ಲ ಹಾಗು ತ್ರಿವಳಿ ತಲಾಖ್ ರದ್ದುಗೊಳಿಸುತ್ತಿರಲಿಲ್ಲ. ಆದರೆ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ಬದ್ಧತೆಯನ್ನು ಮೋದಿ ಈಡೇರಿಸುತ್ತಿದ್ದಾರೆ ಎಂದರು.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ಬದ್ಧತೆಯನ್ನು ಈಡೇರಿಸಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಸಾಧ್ವಿ ಋತಂಭರ ಅವರು ವಾತ್ಸಲ್ಯ ಮತ್ತು ಮಾತೃತ್ವದ ದ್ಯೋತಕ ಎಂದು ಬಣ್ಣಿಸಿದ ಮುಖ್ಯಮಂತ್ರಿ, ಅವರು ದೀರ್ಘಾಯುಷ್ಯವನ್ನು ಹೊಂದಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂತರ ಆಶೀರ್ವಾದ ಪಡೆದುಕೊಂಡರು. "ರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಸಾಧ್ವಿ ಋತಂಭರ ಅವರು ನೀಡಿದ ಉಪನ್ಯಾಸಗಳಿಂದ ನಾನು ಸ್ಫೂರ್ತಿ ಪಡೆದಿದ್ದೇನೆ, ಋತಂಭರ ಅವರ ವಾತ್ಸಲ್ಯ ಮತ್ತು ಆಶೀರ್ವಾದವು ಹೆಚ್ಚು ಉತ್ಸಾಹ ಮತ್ತು ಶಕ್ತಿಯಿಂದ ಜನರ ಸೇವೆ ಮಾಡಲು ಪ್ರೇರೇಪಿಸಿತು" ಎಂದರು.
ಏಕರೂಪ ನಾಗರಿಕ ಸಂಹಿತೆ ಎಂದರೇನು?: ಎಲ್ಲ ಧರ್ಮಗಳ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ಮಕ್ಕಳ ಪಾಲನೆ ಮತ್ತು ಇತರೆ ವಿಷಯಗಳಲ್ಲಿ ಏಕರೂಪತೆ ತರುವುದೇ ಏಕರೂಪ ನಾಗರಿಕ ಸಂಹಿತೆಯ ಗುರಿ. ಇದು ಮದುವೆ ಅಥವಾ ಇತರೆ ಯಾವುದೇ ಧಾರ್ಮಿಕ ಸಂಪ್ರದಾಯಗಳಿಗೆ ಮಾನ್ಯತೆ ನೀಡುವುದಿಲ್ಲ. ಮೂಲಗಳ ಪ್ರಕಾರ, ವಿಚ್ಛೇದನವು ನ್ಯಾಯಾಲಯದ ಮೂಲಕ ಮಾತ್ರ ಮಾನ್ಯವಾಗಿರುತ್ತದೆ.
ಇದನ್ನೂ ಓದಿ:ಉತ್ತರಾಖಂಡ : ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರಕ್ಕೆ ದೀಪಾವಳಿ ನಂತರ ವಿಶೇಷ ಅಧಿವೇಶನ?
ಮದುವೆ ಇಲ್ಲದೇ ಲಿವಿಂಗ್ ಟುಗೆದರ್ ಅಂದರೆ ಲಿವ್-ಇನ್ ರಿಲೇಶನ್ ಶಿಪ್ನಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕಲು ಹೊಸ ಕಾನೂನಿನಲ್ಲಿ ಅವಕಾಶವಿದೆ. ನಿಗದಿತ ಕಾರ್ಯವಿಧಾನದ ಪ್ರಕಾರ ಮತ್ತು ನಿಗದಿತ ನಮೂನೆಯಲ್ಲಿ ಲಿವ್-ಇನ್ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು. ನೋಂದಣಿಗೂ ಅವಕಾಶವಿರುತ್ತದೆ. ನೋಂದಣಿ ಪ್ರಕ್ರಿಯೆಯ ಭಾಗವಾಗಿ ಲಿವ್-ಇನ್ ಸಂಬಂಧದ ಮಾಹಿತಿ ಹುಡುಗ ಮತ್ತು ಹುಡುಗಿಯ ಪೋಷಕರಿಗೆ ಹೋಗುತ್ತದೆ. ಹಾಗು ಬಹುಪತ್ನಿತ್ವ, ಹಲಾಲಾ ಮತ್ತು ಇದ್ದತ್ ನಿಷೇಧಿಸಲು ಹೊಸ ಮಸೂದೆಯಲ್ಲಿ ಅವಕಾಶವಿದೆ. ಇದಲ್ಲದೇ, ಹೆಣ್ಣುಮಕ್ಕಳಿಗೆ ಮದುವೆಯಾಗುವ ಕನಿಷ್ಠ ವಯಸ್ಸಿನಲ್ಲೂ ಬದಲಾವಣೆಯಾಗುವ ಸೂಚನೆಗಳಿವೆ.