ನವದೆಹಲಿ:ಯುಎಇಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಖಾತೆಯ ರಾಜ್ಯ ಸಚಿವ ಒಮರ್ ಸುಲ್ತಾನ್ ಅಲ್ ಒಲಾಮಾ ಅವರು ಬುಧವಾರ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಶ್ಲಾಘಿಸಿದ್ದಾರ. ಭೌಗೋಳಿಕ ರಾಜಕೀಯ ಹಗ್ಗಜಗ್ಗಾಟದ ನಡುವೆ ಜೈಶಂಕರ್ ವಿಶ್ವ ಮಟ್ಟದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ವೈಖರಿ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಕೇಂದ್ರ ಮಂತ್ರಿಗಳು ಮತ್ತು ಹಲವಾರು ಸಂಸದರು ಭಾಗವಹಿಸಿದ್ದ ದೆಹಲಿ ಮೂಲದ ಚಿಂತಕರ ಚಾವಡಿ ಸಮಾವೇಶದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ ಒಮರ್ ಸುಲ್ತಾನ್ ಅಲ್ ಒಲಾಮಾ ಅವರು ಜೈಶಂಕರ್ ಅವರನ್ನು ಶ್ಲಾಘಿಸಿದರು.
ಐತಿಹಾಸಿಕವಾಗಿ ಜಗತ್ತು ಏಕಧ್ರುವೀಯ, ದ್ವಿಧ್ರುವಿ ಅಥವಾ ತ್ರಿಧ್ರುವೀಯವಾಗಿದೆ. ಇದರಲ್ಲಿ ನೀವು ನಿಮ್ಮ ಬದಿಯನ್ನು ಆರಿಸಬೇಕಿದೆ. ಇಂಥ ಸಂದರ್ಭದಲ್ಲಿ ನಿಮ್ಮ ವಿದೇಶಾಂಗ ವ್ಯವಹಾರಗಳ ಸಚಿವರಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ನಾನು ಅವರ ಕೆಲ ಭಾಷಣಗಳನ್ನು ನೋಡಿದ್ದೇನೆ. ಯುಎಇ ಮತ್ತು ಭಾರತ ಯಾರ ಪರವೂ ವಾಲುವ ಅಗತ್ಯವಿಲ್ಲ ಎಂಬುದು ಎರಡು ದೇಶಕ್ಕೂ ಸ್ಪಷ್ಟವಾಗಿದೆ ಎಂದು ಒಮರ್ ಸುಲ್ತಾನ್ ಅಲ್ ಒಲಾಮಾ ಪ್ರತಿಕ್ರಿಯಿಸಿದರು.
ಅಂತಿಮವಾಗಿ ಭೌಗೋಳಿಕ ರಾಜಕೀಯವು ಆಯಾ ದೇಶಗಳ ಉತ್ತಮ ಹಿತಾಸಕ್ತಿಯ ದೃಷ್ಟಿಯಿಂದ ನಿರ್ಧರಿಸಲ್ಪಡುತ್ತದೆ. ಐತಿಹಾಸಿಕವಾಗಿ ಅಸ್ತಿತ್ವದಲ್ಲಿದ್ದ ಮಾದರಿಯು ದುರದೃಷ್ಟವಶಾತ್ ಇನ್ನು ಮುಂದೆ ಇಲ್ಲ. ಇಂದು ಯಾವುದೇ ಒಂದು ದೇಶವು ತನ್ನ ಹಿತಾಸಕ್ತಿಗಳ ಬಗ್ಗೆ ಯೋಚಿಸಬೇಕಾಗಿದೆ ಎಂದು ಅವರು ತಿಳಿಸಿದರು.