ತಿರುವನಂತಪುರಂ(ಕೇರಳ): ಇಲ್ಲಿನ ಯುವ ಕಾಂಗ್ರೆಸ್ ಕಾರ್ಯಕರ್ತರು ವಿಮಾನದೊಳಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಆಗ್ರಹಿಸಿ, ಅವರ ವಿರುದ್ಧ ಕಪ್ಪು ಅಂಗಿ ಧರಿಸಿ ಘೋಷಣೆಗಳನ್ನು ಕೂಗಿದ್ದಾರೆ. ಮುಖ್ಯಮಂತ್ರಿ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದ್ದ ವಿಮಾನ ಹತ್ತಿರುವ ಕೈ ಕಾರ್ಯಕರ್ತರು ಸಿಎಂ ಬಳಿ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಎಲ್‌ಡಿಎಫ್ ಸಂಚಾಲಕ ಇ.ಪಿ.ಜಯರಾಜನ್ ಪ್ರತಿಭಟನಾಕಾರರನ್ನು ದೂರ ತಳ್ಳಿದ್ದಾರೆ ಎಂಬ ಮಾಹಿತಿಯಿದೆ.
ಯುವ ಕಾಂಗ್ರೆಸ್ ಮಟ್ಟನ್ನೂರು ಬ್ಲಾಕ್ ಅಧ್ಯಕ್ಷ ಫರ್ಸಿನ್ ಮಜೀದ್ ಮತ್ತು ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಆರ್.ಕೆ.ನವೀನ್ ಕುಮಾರ್ ಪ್ರತಿಭಟನೆ ಮಾಡಿದವರೆಂದು ತಿಳಿದುಬಂದಿದೆ. ವಿಮಾನ ನಿಲ್ದಾಣದಲ್ಲಿ ಪಿಣರಾಯಿ ವಿರುದ್ಧ ಪ್ರತಿಭಟನೆ ನಡೆಸಲು ಕಪ್ಪು ಅಂಗಿ ಧರಿಸಿ ಬಂದಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು. ಆದರೂ ವಿಮಾನದೊಳ ಬಂದು ಪ್ರತಿಭಟನೆ ನಡೆಸಿದ್ದಾರೆ.