ಕರ್ನಾಟಕ

karnataka

ETV Bharat / bharat

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್​: ಮನನೊಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ

Two Young Women Suicide: ವಾಟ್ಸ್‌ಆ್ಯಪ್ ಡಿಪಿಯನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಅಶ್ಲೀಲವಾಗಿ ಪೋಸ್ಟ್​ ಮಾಡಿದ್ದರಿಂದ ಮನನೊಂದ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನನೊಂದು ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ
ಮನನೊಂದು ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

By ETV Bharat Karnataka Team

Published : Sep 6, 2023, 3:34 PM IST

ನಲ್ಗೊಂಡ (ತೆಲಂಗಾಣ): ಕಿಡಿಕೇಡಿಗಳ ಕೃತ್ಯಕ್ಕೆ ಇಬ್ಬರು ಯುವತಿಯರು ಪ್ರಾಣ ಕಳೆದುಕೊಂಡ ಘಟನೆ ಹೈದರಾಬಾದ್​ನ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಮನಿಷಾ (20) ಮತ್ತು ದಂತಬೋಯಿನ ಶಿವನಾಯಿ (20) ಮೃತ ದುರ್ದೈವಿಗಳು. ವಾಟ್ಸ್‌ಆ್ಯಪ್ ಡಿಪಿಯನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಕ್ಕೆ ಮನನೊಂದ ಯುವತಿಯರಿಬ್ಬರು ಮಂಗಳವಾರ ನಲ್ಗೊಂಡದ ರಾಜೀವ್ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಇಂದು ಮೃತಪಟ್ಟಿರುವುದಾಗಿ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಇಬ್ಬರು ಪಾರ್ಕ್ ಗೇಟ್ ಹೊರಗಿದ್ದ ಮರದ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅವರನ್ನು ಗಮನಿಸಿದ ದಾರಿಹೋಕರು, ಇಬ್ಬರು ಯುವತಿಯರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ತಮ್ಮ ಮಕ್ಕಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಮೃತ ಯುವತಿಯರ ಪೋಷಕರು ಈ ಬಗ್ಗೆ ನಲ್ಗೊಂಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಶೋಧನೆಯಲ್ಲಿ ತೊಡಗಿದ್ದಾರೆ.

ನಕ್ಕಲಪಲ್ಲಿ ಮೂಲದ ಮೃತ ಯುವತಿಯರು ಬಿಎಸ್​​​​​ಸಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಇಂಟರ್ ಓದುತ್ತಿದ್ದಾಗಿನಿಂದ ಸ್ನೇಹಿತರಾಗಿದ್ದರಿಂದ ಇಬ್ಬರು ಜೊತೆಯಾಗಿಯೇ ಪಟ್ಟಣದ ಖಾಸಗಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ರಜೆ ಇರುವುದರಿಂದ ಕಳೆದ 20 ದಿನಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದರು. ಮಂಗಳವಾರ ಕಾಲೇಜಿನಲ್ಲಿ ಲ್ಯಾಬ್ ಪರೀಕ್ಷೆ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಲ್ಯಾಬ್​ಗೆ ಹೋಗದೇ ನೇರವಾಗಿ ಸ್ಥಳೀಯ ಎನ್‌ಜಿ ಕಾಲೇಜು ಹಿಂಭಾಗದಲ್ಲಿರುವ ರಾಜೀವ್ ಪಾರ್ಕ್‌ಗೆ ತೆರಳಿದ್ದರು.

ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ಕುಳಿತ ಅವರು, ಬಳಿಕ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಪ್ರಜ್ಞೆ ತಪ್ಪುವುದಕ್ಕೂ ಮುನ್ನ ಹಾಸ್ಟೆಲ್‌ನಲ್ಲಿರುವ ತಮ್ಮ ಸ್ನೇಹಿತರಿಗೆ ಕರೆ ಮಾಡಿ ನಡದೆ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯರನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರು ಯುವತಿಯರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ.

''ವಾಟ್ಸ್​ಆ್ಯಪ್​​ ಡಿಪಿಗಳಿಂದ ತೆಗೆದುಕೊಳ್ಳಲಾಗಿದ್ದ ಅವರ ಫೋಟೋಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಲ್ಲದೇ ಕೆಲವು ಕಿಡಿಗೇಡಿಗಳು ಕಿರುಕುಳ ನೀಡುತ್ತಿದ್ದರಿಂದ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಪೋಷಕರು ದೂರಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ನಲ್ಗೊಂಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಲಾಕ್ ಮೇಲ್ ಮಾಡಿದವರ ಪತ್ತೆಗಾಗಿ ಶೋಧನೆ ನಡೆದಿದೆ. ಅನುಮಾನದ ಹಿನ್ನೆಲೆಯಲ್ಲಿ ಕೆಲವರ ಫೋನ್ ಸಂಭಾಷಣೆಗಳನ್ನು ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ'' ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

''ನಮ್ಮ ಮಕ್ಕಳಿಗೆ ಯಾವುದೇ ಪ್ರೀತಿ - ಪ್ರೇಮದ ಬಗ್ಗೆ ಗೊತ್ತಿಲ್ಲ. ಕಳೆದ ಮೂರು ದಿನಗಳಿಂದ ಯಾರೋ ಕರೆ ಮಾಡಿ ಬೆದರಿಕೆ ಹಾಕುತ್ತಿರುವುದಾಗಿ ಹೇಳಿದ್ದರು. 15 ಲಕ್ಷ ನೀಡುವಂತೆ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಹ ಅವರು ತಿಳಿಸಿದ್ದರು. ಇಷ್ಟು ಹಣ ಕೊಡುವ ಸ್ಥಿತಿ ಇಲ್ಲದ್ದರಿಂದ ಹಾಗೂ ಕುಟುಂಬ ಸದಸ್ಯರಿಗೆ ಹೊರೆಯಾಗಬಾರದು ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ'' ಮೃತ ಯುವತಿಯ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:Tibetan man killed: ಮುಂಡಗೋಡದಲ್ಲಿ ಇಬ್ಬರು ಟಿಬೆಟಿಯನ್ ವ್ಯಕ್ತಿಗಳ ನಡುವೆ ಮಾರಾಮಾರಿ: ಓರ್ವ ಸಾವು, ಮಾಜಿ ಸೈನಿಕನಿಗೆ ಗಂಭೀರ ಗಾಯ

ABOUT THE AUTHOR

...view details