ಎರ್ನಾಕುಲಂ (ಕೇರಳ):ಇಂದಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನವೇ ನಮಗೆ ಮೂಲಾಧಾರ. ಅದು ಇಲ್ಲದೇ, ನಮ್ಮ ಜೀವನ ನಡೆಯದು ಎಂಬುವಷ್ಟರ ಮಟ್ಟಿಗೆ ಅದರೊಂದಿಗೆ ಮಿಳಿತವಾಗಿದ್ದೇವೆ. ತಂತ್ರಜ್ಞಾನ ಮಾಡುವ ಉಪಕಾರದಷ್ಟೇ, ಅಪಾಯವೂ ಉಂಟು ಮಾಡಬಲ್ಲದು ಎಂಬುದನ್ನು ಈ ಘಟನೆ ಸಾಕ್ಷೀಕರಿಸುತ್ತದೆ. ಗೊತ್ತಿಲ್ಲದ ದಾರಿಯಲ್ಲಿ ಸಾಗಲು ಜಿಪಿಎಸ್ ಬಳಸಿ ಕಾರೊಂದು ನದಿಗೆ ಬಿದ್ದಿದ್ದು, ಇಬ್ಬರು ಯುವ ವೈದ್ಯರು ಸಾವಿಗೀಡಾಗಿದ್ದಾರೆ. ಇನ್ನೂ ಮೂವರು ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳದ ಎರ್ನಾಕುಲಂನಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಜಿಪಿಎಸ್ ಹಾಕಿಕೊಂಡು ಕಾರು ಚಲಾಯಿಸುತ್ತಿದ್ದಾಗ ತಪ್ಪಾಗಿ ದಾರಿ ತೋರಿಸಿದ್ದು, ಕಾರು ನದಿ ಸೇರಿದೆ. ಇದರಿಂದ ವೈದ್ಯರು ಸೇರಿ ಐವರಿದ್ದ ಕಾರು ನೀರಿನಲ್ಲಿ ಮುಳುಗಿದ್ದು, ಸ್ಥಳೀಯರ ರಕ್ಷಣೆಯಲ್ಲಿ ಮೂವರು ಬದುಕುಳಿದು ಇಬ್ಬರು ಸಾವಿಗೀಡಾಗಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಚಾತುರ್ಯ ನಡೆದಿದ್ದು ಹೀಗೆ:ಎರ್ನಾಕುಲಂ ಗೋತುರುಗು ಎಂಬಲ್ಲಿ ಇಬ್ಬರು ವೈದ್ಯರಾದ ಅಜ್ಮಲ್ ಮತ್ತು ಅದ್ವೈತ್ ಅವರಿದ್ದ ಕಾರು ಸಾಗುತ್ತಿತ್ತು. ಜನ್ಮದಿನದ ನಿಮಿತ್ತ ಅವರು ಶಾಪಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ತೆರಳುತ್ತಿದ್ದರು. ಜೋರು ಮಳೆ ಬರುತ್ತಿದ್ದ ಕಾರಣ, ದಾರಿ ಅಸ್ಪಷ್ಟವಾಗಿ ಕಾಣುತ್ತಿತ್ತು. ಇದೇ ವೇಳೆ ದಾರಿ ಗುರುತು ಸಿಗದೇ ಜಿಪಿಎಸ್ ಆನ್ ಮಾಡಿದ್ದಾರೆ. ಗೋತುರುಗು ಎಂಬಲ್ಲಿ ಸಾಗುತ್ತಿದ್ದಾಗ ಕಾರು ಅಚಾನಕ್ಕಾಗಿ ಆಗಿ ಪೆರಿಯಾರ್ ನದಿಗೆ ಉರುಳಿಬಿದ್ದಿದೆ.