ಕರ್ನಾಟಕ

karnataka

ETV Bharat / bharat

ಹೊಸ ವರ್ಷದಂದೇ ಎರಡು ಕಾರ್ಖಾನೆಗಳಲ್ಲಿ ಅಗ್ನಿ ದುರಂತ: ಮಹಿಳೆಯರು ಸೇರಿ ಐವರ ದುರ್ಮರಣ - ಅಗ್ನಿ ದುರಂತ

ಹೊಸ ವರ್ಷದ ಮೊದಲ ದಿನವೇ ಮಹಾರಾಷ್ಟ್ರದಲ್ಲಿ ಅಗ್ನಿ ದುರಂತ - ನಾಸಿಕ್ ಜಿಂದಾಲ್ ಕಾರ್ಖಾನೆಯ ಘಟಕದಲ್ಲಿ ಬೆಂಕಿ- ಇಬ್ಬರು ಕಾರ್ಮಿಕರ ಸಾವು - ಸೊಲ್ಲಾಪುರ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಮೂವರು ಮಹಿಳೆಯರ ದುರ್ಮರಣ

nashik-factory-blast-and-blaze
ಎರಡು ಕಾರ್ಖಾನೆಗಳಲ್ಲಿ ಅಗ್ನಿ ದುರಂತ

By

Published : Jan 1, 2023, 7:58 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಎರಡು ಪ್ರತ್ಯೇಕ ಬೆಂಕಿ ಅವಘಡಗಳು ಸಂಭವಿಸಿವೆ. ನಾಸಿಕ್ ಜಿಲ್ಲೆಯಲ್ಲಿ ಜಿಂದಾಲ್ ಕಾರ್ಖಾನೆಯಲ್ಲಿ ಬಾಯ್ಲರ್‌ನಲ್ಲಿ ಸ್ಫೋಟ ಉಂಟಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರೆ, ಸೊಲ್ಲಾಪುರ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ.

ನಾಸಿಕ್ ಜಿಲ್ಲೆಯ ಇಗತ್‌ಪುರಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಜಿಂದಾಲ್ ಪಾಲಿಫಿಲ್ಮ್ಸ್ ಕಂಪನಿಯ ಸ್ಥಾವರದ ಬಾಯ್ಲರ್‌ನಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಸ್ಫೋಟ ಉಂಟಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕಾರ್ಖಾನೆಯಲ್ಲಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ 17 ಮಂದಿಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿ ಬರುತ್ತಿದ್ದ ಕಾರು ಅಪಘಾತ: ನಾಲ್ವರು ಸಾವು, ಓರ್ವನ ಸ್ಥಿತಿ ಗಂಭೀರ

ಈ ಸ್ಫೋಟದ ಸಂದರ್ಭದಲ್ಲಿ ಘಟಕದಲ್ಲಿ ಕನಿಷ್ಠ 250 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದರಲ್ಲಿ ಹೆಚ್ಚಿನವರು ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾದರು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇತ್ತ, ಈ ಅಗ್ನಿ ದುರಂತದ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಂದಾಜು 17 ಮಂದಿಯನ್ನು ರಕ್ಷಿಸಿದ್ದಾರೆ. ಇದೇ ವೇಳೆ ಇಬ್ಬರು ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ಅವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಿಂದಾಲ್ ಕಾರ್ಖಾನೆಯ ಘಟನಾ ಸ್ಥಳಕ್ಕೆ ನಾಸಿಕ್ ಜಿಲ್ಲಾಧಿಕಾರಿ ಗಂಗಾಧರನ್ ಮತ್ತು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಪಾಟೀಲ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇಗತ್‌ಪುರಿ ಮತ್ತು ನಾಸಿಕ್​ ನಗರದಿಂದ ಸುಮಾರು 12 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.

ದಟ್ಟ ಹೊಗೆ - ಜನರಲ್ಲಿ ಆತಂಕ: ಈ ಸ್ಫೋಟದಿಂದ ಬೂದು ಮತ್ತು ಬಿಳಿ ಬಣ್ಣದ ದಟ್ಟ ಹೊಗೆಯು ದೊಡ್ಡ ಪ್ರಮಾಣದಲ್ಲಿ ಆವರಿಸಿತ್ತು. ಸುಮಾರು ದೂರದವರೆಗೂ ದಟ್ಟ ಹೊಗೆ ಗೋಚರಿಸಿತ್ತು. ಇದು ಸುಮಾರು 20 ಹಳ್ಳಿಗಳ ನಿವಾಸಿಗಳನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದಲ್ಲದೇ, ಆತಂಕವನ್ನೂ ಸೃಷ್ಟಿಸಿತ್ತು.

ಸ್ಥಳಕ್ಕೆ ಸಿಎಂ ಶಿಂದೆ ಭೇಟಿ: ಜಿಂದಾಲ್ ಕಾರ್ಖಾನೆಯ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ದಾದಾ ಭೂಸೆ ಕೂಡ ಭೇಟಿ ನೀಡಿ ಮಾಹಿತಿ ಪಡೆದರು. ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಶಿಂದೆ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಶಿಂದೆ, ಇದೊಂದು ತುಂಬಾ ದೊಡ್ಡ ದುರಂತವಾಗಿದೆ. ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದರು. ಅಲ್ಲಿಂದ ಸಿಎಂ ಮತ್ತು ಸಚಿವರು ಇತರ ಅಧಿಕಾರಿಗಳೊಂದಿಗೆ ಗಾಯಾಳುಗಳು ದಾಖಲಾಗಿರುವ ಸ್ಥಳೀಯ ಆಸ್ಪತ್ರೆಗೂ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಮತ್ತೊಂದಡೆ, ಜಿಂದಾಲ್​ ಕಾರ್ಖಾನೆಯಲ್ಲಿ ಬೆಂಕಿ ಅವಘಡದ ಸುದ್ದಿ ಹೊರ ಬರುತ್ತಲೇ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಡಾ.ಭಾರತಿ ಪವಾರ್ ಸಹ ನವದೆಹಲಿಯಿಂದಲೇ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರು.

ಸೊಲ್ಲಾಪುರದಲ್ಲಿ ಮೂವರು ಮಹಿಳೆಯರು ಸಾವು: ಸೊಲ್ಲಾಪುರ ಜಿಲ್ಲೆಯಲ್ಲೂ ಭಾರಿ ಬೆಂಕಿ ಅವಘಡ ನಡೆದಿದೆ. ಬಾರ್ಶಿ ತಾಲೂಕಿನ ಬಳಿಯ ಶಿರಾಲೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಮೂವರು ಮಹಿಳೆಯರು ದುರ್ಮರಣ ಹೊಂದಿದ್ದಾರೆ. ಕಾರ್ಖಾನೆಯಲ್ಲಿ ಪಟಾಕಿ ತಯಾರಿಸುವ ಕೆಲಸ ನಡೆಯುತ್ತಿರುವಾಗಲೇ ಭೀಕರ ಸ್ಫೋಟ ಸಂಭವಿಸಿದ್ದು, ಈ ವೇಳೆ ಸುಮಾರು 40 ಮಂದಿ ನೌಕರರು ಕೆಲಸ ಮಾಡುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ.

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯ ಗ್ರಾಮಸ್ಥರು ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಜೊತೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ದೌಡಾಯಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಈ ಭೀಕರ ಸ್ಫೋಟದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಆರೇಳು ಕಾರ್ಮಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬ ರೋಗಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪಾಂಗ್ರಿ ಗ್ರಾಮೀಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವೀರೇಂದ್ರ ಪಾಟೀಲ್ ಮಾಹಿತಿ ನೀಡಿದ್ದಾರೆ.

ಎಲ್ಲ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಾರ್ಶಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಮತ್ತೊಬ್ಬ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಸ್ಮಾನಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಈ ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ದೇವಸ್ಥಾನಕ್ಕೆ ಬಂದಿದ್ದ ಎಂಟು ಜನರ ದುರ್ಮರಣ

ABOUT THE AUTHOR

...view details