ಛಾಪ್ರಾ (ಬಿಹಾರ): ಗಾಯತ್ರಿ ಮಹಾಯಜ್ಞ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಶುಕ್ರವಾರ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ದರಿಯಾಪುರದ ಮಸ್ತಿಚಕ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಮಹಾಯಜ್ಞದಲ್ಲಿ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿ ಈ ದುರಂತ ಜರುಗಿದೆ ಎಂದು ವರದಿಯಾಗಿದೆ.
ಮೃತರನ್ನು ಔರಂಗಾಬಾದ್ ಜಿಲ್ಲೆಯ ದೌದ್‌ನಗರ ನಿವಾಸಿಗಳಾದ ಕಲಿಯನ್ ದೇವಿ (50 ವರ್ಷ) ಮತ್ತು ಪಾರ್ವತಿ ದೇವಿ (63) ಎಂದು ಗುರುತಿಸಲಾಗಿದೆ. ಈ ಘಟನೆಯ ವಿಷಯ ತಿಳಿದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದರು. ಜೊತೆಗೆ ಪೊಲೀಸ್ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. ಈ ಕಾಲ್ತುಳಿತದಲ್ಲಿ ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಅಮನ್ ಸಮೀರ್ ಪ್ರತಿಕ್ರಿಯಿಸಿ, ಕಾಲ್ತುಳಿತದಂತಹ ಯಾವುದೇ ಪರಿಸ್ಥಿತಿ ಇರಲಿಲ್ಲ. ಆದರೆ, ಇಂದು ಬೆಳಗ್ಗೆ ಮಹಾಯಜ್ಞದ ಗೇಟ್ ತೆರೆದಾಗ 100ಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ಒಳ ಪ್ರವೇಶಿಸಿದ್ದಾರೆ. ಈ ವೇಳೆ, ಕೆಲವರು ಕೆಳಗಡೆ ಬಿದ್ದಿದ್ದಾರೆ. ಇದರಲ್ಲಿ ಇಬ್ಬರು ಮಹಿಳೆಯರು ಕೂಡ ಸೇರಿದ್ದರು. ಕೆಳಗಡೆ ಬಿದ್ದ ಬಳಿಕ ಅಲ್ಲಿಯೇ ಅಸ್ವಸ್ಥರಾಗಿದ್ದರು. ಇದರಿಂದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.