ಮುಜಾಫರ್‌ಪುರ (ಬಿಹಾರ):ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯಲ್ಲಿದ್ದ ಫ್ರಿಡ್ಜ್ ಸಿಡಿದು ಬಾಲಕಿ ಮತ್ತು ಮಹಿಳೆ ಜೀವಂತವಾಗಿ ಬೆಂಕಿಗೆ ಆಹುತಿಯಾದ ದುರ್ಘಟನೆ ಬಿಹಾರದ ಮುಜಾಫುರ್ಪುರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆಗೂ ಹಾನಿಯುಂಟಾಗಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಫ್ರಿಡ್ಜ್ ಸ್ಫೋಟವಾಗಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕಿ ಮತ್ತು ಆಕೆಯ ಅತ್ತಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಇಬ್ಬರೂ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಣ್ಣೆದುರು ಮಗಳು ಮತ್ತು ಸೊಸೆ ಬೆಂಕಿಯಲ್ಲಿ ಬೆಂದಿದ್ದನ್ನು ಮನೆಯ ಯಜಮಾನಿ ಕಂಡಿದ್ದಾರೆ. ದೊಡ್ಡ ಸದ್ದು ಮತ್ತು ಕುಟುಂಬಸ್ಥರ ಆಕ್ರಂದನದಿಂದಾಗಿ ಸುತ್ತಲಿನ ಜನರು ಜಮಾಯಿಸಿದ್ದರು. ಸ್ಫೋಟದಿಂದಾಗಿ ಮನೆಗೂ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ದುರಂತ:ಮನೆಯಲ್ಲಿ ದಿನಬಳಕೆಗೆ ಇದ್ದ ಫ್ರಿಡ್ಜ್ ರಾತ್ರಿ ಏಕಾಏಕಿ ಸ್ಫೋಟಗೊಂಡಿದ್ದು, ಭಾರಿ ಆತಂಕ ಉಂಟುಮಾಡಿದೆ. ಶಾರ್ಟ್ ಸರ್ಕ್ಯೂಟ್ ಆಗಿದ್ದೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಸ್ಫೋಟದಿಂದ ಮನೆಗೂ ಬೆಂಕಿ ಹೊತ್ತಿಕೊಂಡಿದ್ದು, ವಸ್ತುಗಳು ಸುಟ್ಟು ಭಸ್ಮವಾಗಿವೆ. ದೊಡ್ಡ ಸದ್ದು ಕೇಳಿ ನೆರೆಹೊರೆಯವರು ಬಂದು ವೀಕ್ಷಿಸಿ ಕುಟುಂಬಸ್ಥರ ನೆರವಿಗೆ ಬಂದಿದ್ದಾರೆ. ಉಳಿದವರನ್ನು ರಕ್ಷಿಸಿ, ಬೆಂಕಿಯನ್ನು ನಂದಿಸಿದ್ದಾರೆ.
ನವವಿವಾಹಿತೆ ಸಾವು:ಸ್ಫೋಟದಲ್ಲಿ ಸಾವಿಗೀಗಾಡದ ಮಹಿಳೆಗೆ 3 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಮನೆಯ ನೀರಜ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ತುಂಬು ಜೀವನ ನಡೆಸಬೇಕಾಗಿದ್ದ ನವವಧು ಅಚಾನಕ್ಕಾಗಿ ನಡೆದ ದುರಂತದಲ್ಲಿ ಸಜೀವ ದಹನವಾಗಿದ್ದಾಳೆ.