ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ 16.5 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ಉಜ್ಬೇಕಿಸ್ತಾನ ಪ್ರಜೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಚಿನ್ನದ ಮೌಲ್ಯ ಮಾರುಕಟ್ಟೆಯಲ್ಲಿ ಬರೋಬ್ಬರಿ 10,39,50,00 ರೂ. (10.39 ಕೋಟಿ) ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಏಷ್ಯಾದ ವ್ಯಕ್ತಿಗಳು ಗಮನಾರ್ಹ ಪ್ರಮಾಣದ ವಿದೇಶಿ ಚಿನ್ನದೊಂದಿಗೆ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ಐಜಿಐ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದರು. ಇದರ ನಡುವೆ ಇಬ್ಬರು ಖದೀಮರು ಅಧಿಕಾರಿಗಳ ಕಣ್ತಪ್ಪಿಸಲು ಕನ್ವೇಯರ್ ಬೆಲ್ಟ್ ಬಳಿ ಚಿನ್ನವಿರುವ ಬ್ಯಾಗ್ಅನ್ನು ಇಟ್ಟು ಹೋಗಿದ್ದರು. ಹೀಗಾಗಿ ಪ್ರಾಥಮಿಕ ತಪಾಸಣೆ ವೇಳೆ ಇವರ ಬಳಿ ಏನೂ ಪತ್ತೆಯಾಗಿರಲಿಲ್ಲ. ಆದರೆ, ಯಾವಾಗ ತಾವು ಸಿಕ್ಕಿ ಬೀಳುತ್ತಿದ್ದೇವೆ ಎಂಬುದನ್ನು ಅರಿತಗೊಂಡ ಚಾಲಾಕಿಗಳು ಮತ್ತೊಂದು ವಿಮಾನದಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಅಂತಿಮವಾಗಿ ಇಬ್ಬರನ್ನೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾದಿಂದ ಸಾಗಿಸಲಾಗುತ್ತಿದ್ದ 36 ಕೆ ಜಿ ಬಂಗಾರ ಜಪ್ತಿ ಮಾಡಿದ ಕೋಸ್ಟ್ ಗಾರ್ಡ್
ಗುಪ್ತಚರ ಮಾಹಿತಿ ಆಧಾರದ ಮೇಲೆ ಮೊದಲಿಗೆ ಮಹಿಳೆಯರನ್ನು ಗುರುತಿಸಲಾಗಿತ್ತು. ವಿಮಾನದಿಂದ ಇಳಿದ ಕ್ಷಣದಿಂದ ಆಕೆ ಮೇಲೆ ನಿಗಾ ವಹಿಸಿ, ಆಕೆಯನ್ನು ನಿಲ್ಲಿಸಲಾಗಿತ್ತು. ಆದಾಗ್ಯೂ, ಆಕೆ ಮತ್ತು ಆಕೆಯ ಬಳಿಯಿದ್ದ ಬ್ಯಾಗ್ಗಳ ತಪಾಸಣೆಯಲ್ಲಿ ಯಾವುದೇ ನಿಷಿದ್ಧ ವಸ್ತುಗಳು ಪತ್ತೆಯಾಗಲಲ್ಲಿ. ನಂತರ ಇದೇ ಗುಪ್ತಚರ ಆಧಾರದ ಮೇಲೆ ಎರಡನೇ ಪ್ರಯಾಣಿಕನನ್ನು ಗುರುತಿಸಲಾಯಿತು. ಆತ ಅನುಮಾನಾಸ್ಪದವಾಗಿ ವರ್ತಿಸುವುದನ್ನು ಗಮನಿಸಿ ಹಿಡಿದುಕೊಳ್ಳಲಾಯಿತು ಎಂದು ವಿವರಿಸಿದ್ದಾರೆ.
ಚಿನ್ನ ಬಿಟ್ಟು ಹೊರಟಿದ್ದ ಚಾಲಾಕಿ ಮಹಿಳೆ: ಸಾಕಷ್ಟು ಕಣ್ಗಾವಲಿನ ಮಧ್ಯೆ ಸಿಕ್ಕಿಬೀಳುವ ಭಯದಿಂದ ಎಂಟ್ರಿ ಹಾಲ್‌ನಲ್ಲಿ ಚಲಾಕಿ ಮಹಿಳೆ ತನ್ನ ಲಗೇಜ್‌ಗಳನ್ನು ಬಿಟ್ಟಿದ್ದಳು. ಆಗ ಕಸ್ಟಮ್ಸ್ ಅಧಿಕಾರಿಗಳು ಗುರುತು ಹಾಕದ ಚೀಲವನ್ನು ಪತ್ತೆ ಹಚ್ಚಿದರು. ಈ ಬ್ಯಾಗ್ ಸ್ಕ್ಯಾನ್ ಮಾಡಿದಾಗ ಚಿನ್ನದ ವಸ್ತುಗಳ ಹಾಗೂ ಇತರ ಅನುಮಾನಾಸ್ಪದ ಚಿತ್ರಗಳು ದೊರೆತಿವೆ. ಇದರಲ್ಲಿ 265 ಸರಗಳು ಇದ್ದು, ಈ ಚಿನ್ನದ ತೂಕ ಸುಮಾರು 16.5 ಕೆಜಿ ಆಗಿದೆ. ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬ್ಯಾಗ್ ಬಿಟ್ಟು ಹೋಗಿದ್ದು, ಇದೇ ಮಹಿಳೆ ಎಂಬುವುದು ಖಚಿತವಾಗಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಆಕೆ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಬಹುದೆಂದು ಶಂಕಿಸಿದ ಕಸ್ಟಮ್ಸ್ ಅಧಿಕಾರಿಗಳ ತಂಡ ಕೂಡಲೇ ಆಕೆಯನ್ನು ವಶಕ್ಕೆ ಪಡೆಯಿತು. ಅಲ್ಲದೇ, ಕಜಕಿಸ್ತಾನದ ಅಲ್ಮಾಟಿಗೆ ಹಾರಾಟ ಮಾಡುವ ಏರ್ ಅಸ್ತಾನಾ ವಿಮಾನದ ಪ್ರಯಾಣಿಕರ ಪಟ್ಟಿಯಲ್ಲಿ ಒಂದೇ ಹೆಸರಿನವರು ಕಂಡುಬಂದಿದ್ದಾರೆ. ಇದರಿಂದ ಅಸ್ತಾನಾ ಮೂಲಕ ಅಲ್ಮಾಟಿಗೆ ಹೊರಡುವ ಪ್ರತಿಯೊಬ್ಬ ಪ್ರಯಾಣಿಕರನ್ನೂ ತಪಾಸಣೆ ನಡೆಸಲಾಯಿತು. ಈ ಇಡೀ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಲಿಗೆ ಟೇಪ್ ಸುತ್ತಿ ಚಿನ್ನ ಕಳ್ಳಸಾಗಣೆ! ಬೆಂಗಳೂರು ಏರ್ಪೋರ್ಟ್‌ನಲ್ಲಿ ಪ್ರಯಾಣಿಕ ಸೆರೆ