ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಇಬ್ಬರು ಪ್ರಜೆಗಳು ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆಗೆ ತೆರಳುತ್ತಿದ್ದ ಸಾವಿರಾರು ಯಾತ್ರಾರ್ಥಿಗಳ ನಡುವೆ ವಿದೇಶಿ ನಾಗರಿಕರು ಕೇಸರಿ ಬಟ್ಟೆ ಧರಿಸಿ ವಿಶೇಷವಾಗಿ ಗಮನ ಸೆಳೆದರು.
ತಮ್ಮ ಪ್ರವಾಸದ ಕುರಿತು ಅಭಿಪ್ರಾಯ ಹಂಚಿಕೊಂಡ ಅವರು, "ಅಮರನಾಥ ಯಾತ್ರೆ ಮಾಡಬೇಕೆಂಬುದು ನಮ್ಮ ಕನಸು. ಹಲವು ವರ್ಷಗಳಿಂದ ಈ ಪ್ರವಾಸಕ್ಕಾಗಿ ಕಾಯುತ್ತಿದ್ದೆವು. ಈ ಕುರಿತಾದ ಹಲವು ವಿಡಿಯೋಗಳನ್ನು ನಾವು ಯೂಟ್ಯೂಬ್ನಲ್ಲಿ ವೀಕ್ಷಿಸಿದ್ದೇವೆ. ಅನೇಕ ವರ್ಷಗಳಿಂದ ಇದಕ್ಕಾಗಿ ಯೋಜಿಸಿದ್ದೆವು. ಇದೀಗ ಕಾಲ ಕೂಡಿ ಬಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ :ಮಳೆಯಿಂದ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ: ಸಂಕಷ್ಟಕ್ಕೆ ಸಿಲುಕಿದ ಧಾರವಾಡದ ಐವರು ಗೆಳೆಯರು
ಅಮರನಾಥ ಯಾತ್ರೆ ಕೈಗೊಳ್ಳಲು ಪ್ರೇರಣೆ ಒದಗಿಸಿದ ವಿಚಾರದ ಕುರಿತು ಮಾತನಾಡಿ, "ರಾಮಕೃಷ್ಣ ಪರಮಹಂಸರ ಭಕ್ತರಾಗಿದ್ದ ಸ್ವಾಮಿ ವಿವೇಕಾನಂದರು ಅಮರನಾಥಕ್ಕೆ ಭೇಟಿ ನೀಡಿದ್ದರು. ಭಗವಾನ್ ಶಿವನ ದರ್ಶನ ಪಡೆದು ಈ ಸ್ಥಳ ಬಹಳ ಮಹತ್ವದ್ದಾಗಿದೆ ಎಂದು ಅವರು ಬಣ್ಣಿಸಿದ್ದರು. ನನಗೆ 40 ವರ್ಷಗಳಿಂದ ಈ ಕಥೆ ತಿಳಿದಿದೆ. ಸ್ವಾಮಿ ವಿವೇಕಾನಂದರು ಬಹಳ ಅನುಭವವುಳ್ಳ ವ್ಯಕ್ತಿ. ನಾವು ಅಮರನಾಥ ಯಾತ್ರೆ ಕೈಗೊಳ್ಳಲು ಅವರೇ ಪ್ರೇರಣೆ. ಇಲ್ಲಿಗೆ ಬಂದ ಬಳಿಕ ನಮ್ಮ ಭಾವನೆಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಭೋಲೆನಾಥನ ಕೃಪೆಯಿಂದ ಮಾತ್ರ ಇದು ಸಾಧ್ಯವಾಗಿದೆ" ಎಂದು ಅವಕಾಶ ಕಲ್ಪಿಸಿದ ಶ್ರೀ ಅಮರನಾಥ ಪುಣ್ಯಕ್ಷೇತ್ರ ಮಂಡಳಿಯನ್ನು ಶ್ಲಾಘಿಸಿದರು.