ಲಕ್ನೋ (ಉತ್ತರ ಪ್ರದೇಶ):ಗೋರಖ್‌ಪುರ ಮತ್ತು ಗೊಂಡಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ಅನುಮತಿ ಬಯಸಿ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ) ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಇಂಥದ್ದೊಂದು ವಿಶೇಷ ಮನವಿ ಸ್ವೀಕರಿಸಿರುವುದು ಇದೇ ಮೊದಲು. ಮಹಿಳಾ ಪೊಲೀಸರಾಗಿ ನೇಮಕಗೊಂಡ ನಂತರ ಈ ಇಬ್ಬರು ಕಾನ್ಸ್‌ಟೇಬಲ್‌ಗಳಿಗೆ ತಮ್ಮ ಲಿಂಗ ಬದಲಾಯಿಸಿಕೊಳ್ಳಲು ಹೇಗೆ ಅನುಮತಿ ನೀಡುವುದು ಎಂಬುದು ಪೊಲೀಸ್ ಅಧಿಕಾರಿಗಳ ಮುಂದಿರುವ ಪ್ರಶ್ನೆ.
ಯುಪಿ ಪೊಲೀಸ್ ಇಲಾಖೆಯ ಹೆಚ್ಚುವರಿ ಡೈರೆಕ್ಟರ್ ಜನರಲ್ (ಎಡಿಜಿ) ಶ್ರೇಣಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಬ್ಬರು ಕಾನ್‌ಸ್ಟೆಬಲ್‌ಗಳು ಲಿಂಗ ಬದಲಾವಣೆಗೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ವಿಭಿನ್ನ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದರು.
"ಲಿಂಗ ಪರಿವರ್ತಗೆ ಒಳಗಾಗಲು ಅನುಮತಿಸಲು ಹಲವು ಸಮಸ್ಯೆಗಳಿವೆ. ಇಬ್ಬರು ಕಾನ್‌ಸ್ಟೆಬಲ್‌ಗಳು ಶಸ್ತ್ರಚಿಕಿತ್ಸೆಯ ನಂತರ ಪುರುಷ ಕಾನ್‌ಸ್ಟೆಬಲ್‌ಗಳೆಂದು ಪರಿಗಣಿಸಿದರೆ ಅವರಿಗೆ ಅಗತ್ಯವಿರುವ ಇತರ ದೈಹಿಕ ಮಾನದಂಡಗಳನ್ನು ಹೊಂದಿಸುವುದು ಹೇಗೆ?. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಎತ್ತರ, ಓಡುವ ಸಾಮರ್ಥ್ಯ ಮತ್ತು ಭುಜ ಬಲದಂತಹ ವಿಭಿನ್ನ ದೈಹಿಕ ಮಾನದಂಡಗಳಿವೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪುರುಷ ಮತ್ತು ಮಹಿಳೆಯರ ನೇಮಕಾತಿ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಮಹಿಳಾ ಮಾನದಂಡಗಳ ಅಡಿಯಲ್ಲಿ ಉದ್ಯೋಗ ಪಡೆದ ನಂತರ ಲಿಂಗವನ್ನು ಬದಲಾಯಿಸುವ ಮಹಿಳಾ ಸಿಬ್ಬಂದಿಯು ಮಾನದಂಡಗಳನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ'' ಎಂದು ವಿವರಿಸಿದರು.