ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿಂದು ಭರ್ಜರಿ ಕಾರ್ಯಾಚರಣೆ ನಡೆಸಿರುವ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೇನೆ, ಪೊಲೀಸರ ಜಂಟಿ ಕಾರ್ಯಾಚರಣೆ; ಮೂವರು ಉಗ್ರರ ಹತ್ಯೆ - ಅನಂತ್‌ನಾಗ್ ಜಿಲ್ಲೆ
ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಹಾಗೂ ಸಿಆರ್‌ಪಿಎಫ್ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
![ಸೇನೆ, ಪೊಲೀಸರ ಜಂಟಿ ಕಾರ್ಯಾಚರಣೆ; ಮೂವರು ಉಗ್ರರ ಹತ್ಯೆ Two unidentified militants killed Anantnag](https://etvbharatimages.akamaized.net/etvbharat/prod-images/768-512-12417619-thumbnail-3x2-terrorr.jpg)
ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಸೇನೆಯ 19 ಆರ್‌ಆರ್ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ (ಸಿಎಎಸ್ಒ) ಆರಂಭಿಸಿತ್ತು. ಶಂಕಿತರು ಇರುವ ಸ್ಥಳದ ಸಮೀಪಕ್ಕೆ ಭದ್ರತಾ ಪಡೆ ಆಗಮಿಸುತ್ತಿದ್ದಂತೆ ಉಗ್ರರು ಗುಂಡು ಹಾರಿಸಿದ್ದಾರೆ. ಈ ವೇಳೆ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 9 ರಂದು, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸಮೀಪದ ಎಲ್‌ಒಸಿ ಉದ್ದಕ್ಕೂ ಸೇನೆಯು ಉಗ್ರರ ಒಳನುಸುಳುವಿಕೆಯನ್ನು ವಿಫಲಗೊಳಿಸಿತು. ಈ ವೇಳೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು. ದಾಳಿಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ರಜೌರಿ ಜಿಲ್ಲೆಯ ಸುಂದರಬನಿ ವಲಯದ ದಾದಲ್ ಪ್ರದೇಶದಲ್ಲಿ ಒಳನುಸುಳುವಿಕೆ ಮತ್ತು ಭಯೋತ್ಪಾದಕರ ಸಂಚಾರದ ಮಾಹಿತಿ ಆಧಾರದ ಮೇಲೆ ಸೇನಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದವು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.