ಜಮ್ಮು- ಕಾಶ್ಮೀರ:ಪಂಚಾಯತ್ ರಾಜ್ ದಿನದ ಹಿನ್ನೆಲೆಯಲ್ಲಿ ಜಮ್ಮು- ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಹಿಂದಿರುಗಿದ ಬೆನ್ನಲ್ಲೇ ಕಣಿವೆಯಲ್ಲಿ ಗುಂಡಿನ ಮೊರೆತ ಕೇಳಿ ಬಂದಿದೆ. ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಕುಲ್ಗಾಮ್ ಜಿಲ್ಲೆಯ ಮಿರ್ಹಾಮಾ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಯ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಕುಲ್ಗಾಮ್ ಜಿಲ್ಲೆಯ ಮಿರ್ಹಾಮಾ ಪ್ರದೇಶದಲ್ಲಿ ಎಲ್‌ಇಟಿ ಸಂಘಟನೆಯ ಮೂವರು ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿಯ ಮೇಲೆಯೇ ಉಗ್ರರು ಗುಂಡು ಹಾರಿಸಿದ್ದಾರೆ. ಈ ವೇಳೆ ನಡೆದ ಚಕಮಕಿಯಲ್ಲಿ ಮೂವರು ಉಗ್ರರನ್ನು ಮಿಲಿಟರಿ ಪಡೆ ಹೊಡೆದು ಹಾಕಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಅಡಗಿರುವ ಉಗ್ರರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.