ಕರ್ನಾಟಕ

karnataka

ETV Bharat / bharat

ಕುಪ್ವಾರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಎನ್​ಕೌಂಟರ್​ ಮಾಡಿದ ಸೇನೆ - ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರು ಹತ

ಇಲ್ಲಿನ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ.

two-terrorists-killed-in-encounter-at-kupwara-district
ಇಬ್ಬರು ಉಗ್ರರ ಎನ್​ಕೌಂಟರ್​ ಮಾಡಿದ ಸೇನೆ

By

Published : May 3, 2023, 2:17 PM IST

ಕುಪ್ವಾರ (ಜಮ್ಮು ಮತ್ತು ಕಾಶ್ಮೀರ):ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಮತ್ತೊಂದು ಎನ್​ಕೌಂಟರ್​ ನಡೆದಿದೆ. ಇಂದು ಬೆಳಗ್ಗೆ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಇಂದು ಬೆಳಗ್ಗೆ ಕುಪ್ವಾರ ಜಿಲ್ಲೆಯ ಪಿಚ್ನಾಡ್ ಮಚಿಲ್ ಪ್ರದೇಶದ ಬಳಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯಿತು. ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಇನ್ನಷ್ಟು ಉಗ್ರರು ಅಡಗಿರುವ ಶಂಕೆಯ ಮೇಲೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಮಾರ್ಚ್‌ನಲ್ಲಿ ಪುಲ್ವಾಮಾದ ಮಿಟ್ರಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿತ್ತು. ಇದಾದ ಬಳಿಕ ಕುಪ್ವಾರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದರು. ಈ ಹಿಂದೆ ಫೆಬ್ರವರಿಯಲ್ಲಿ ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪುಲ್ವಾಮಾ ಜಿಲ್ಲೆಯ ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಗ್ರೆನೇಡ್ ದಾಳಿಗೆ ಐವರು ಸೈನಿಕರು ಮೃತ:ಏಪ್ರಿಲ್​ 20ರಂದು ಭಯೋತ್ಪಾದಕರು ನಡೆಸಿದ ಗ್ರೆನೇಡ್​ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಪೂಂಚ್​ ಜಿಲ್ಲೆಯ ಭಟ ಧುರಿಯನ್ ಪ್ರದೇಶದ ಹೆದ್ದಾರಿಯಲ್ಲಿ ಈ ದಾಳಿ ನಡೆದಿತ್ತು.

ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಐವರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಿಂಬರ್ ಗಲಿಯಿಂದ ಸಾಂಗಿಯೋಟ್‌ಗೆ ಸೇನಾ ವಾಹನ ತೆರಳುತ್ತಿತ್ತು. ಈ ವೇಳೆ ಏಕಾಏಕಿ ವಾಹನದ ಮೇಲೆ ಉಗ್ರರು ಎಸೆದ ಗ್ರೆನೇಡ್​ನಿಂದ ಬೆಂಕಿ ಹೊತ್ತಿಕೊಂಡಿತ್ತು ಎಂದು ಸೇನಾಧಿಕಾರಿಗಳು ತಿಳಿಸಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಲಭ್ಯವಾಗಿತ್ತು. ಇದರಲ್ಲಿ ಯೋಧರ ಮೃತದೇಹಗಳು ವಾಹನದ ಪಕ್ಕದಲ್ಲಿಯೇ ಬಿದ್ದಿರುವುದು ಮತ್ತು ಸೇನಾ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿತ್ತು.

ಸೇನಾ ವಾಹನದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಧಾರ್ಮಿಕ ಧರ್ಮಗುರು ಮತ್ತು ಓರ್ವ ಸರ್ಕಾರಿ ನೌಕರ ಮತ್ತು ಇತರೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಉಗ್ರಗಾಮಿಗಳೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆ ಮರ್ಕಝ್ ಉಲ್ ಮಾರಿಫ್ ಎಂಬ ಮದರಸಾದ ಮೊಲ್ವಿ ಮಂಜೂರ್ ಎಂಬುವವರನ್ನು ಬಂಧಿಸಲಾಗಿತ್ತು.

ಜಾರ್ಖಂಡ್​ನಲ್ಲಿ ನಕ್ಸಲ್​ ದಾಳಿ:ಜಾರ್ಖಂಡ್​ನ ಸರಂದಾ ಎಂಬಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಗಾಯಗೊಂಡಿದ್ದರು. ಗಾಯಗೊಂಡ ಸೈನಿಕರು ಕೋಬ್ರಾ ಬೆಟಾಲಿಯನ್‌ಗೆ ಸೇರಿದವರಾಗಿದ್ದಾರೆ. ಯೋಧರಾದ ಸೂರಜ್ ಕುಮಾರ್, ಬುಧದೇವ್, ಸುಶೀಲ್ ಲಕ್ಡಾ, ಕೃಷ್ಣನಾಥ್ ಬೊಕ್ರಾ ಗಾಯಗೊಂಡಿದ್ದರು. ಸರಂದಾ ಅರಣ್ಯದಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಈ ಗುಂಡಿನ ಚಕಮಕಿ ನಡೆದಿತ್ತು. ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ದಾಳಿ ಮಾಡಿದ್ದರು.

ಓದಿ:ಪೂಂಚ್ ಭಯೋತ್ಪಾದಕ ದಾಳಿ ಪ್ರಕರಣ.. ಧಾರ್ಮಿಕ ಗುರು, ಸರ್ಕಾರಿ ನೌಕರ ಸೇರಿ ಆರು ಮಂದಿ ಬಂಧನ

ABOUT THE AUTHOR

...view details