ಜಮ್ಮು ಮತ್ತು ಕಾಶ್ಮೀರ : ಇಲ್ಲಿನ ಪೂಂಚ್ ಸೆಕ್ಟರ್‌ನ ಬಹದ್ದೂರ್ ಎಂಬಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಇಂದು ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ದೇಶದ ಗಡಿಯೊಳಗೆ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸೋಮವಾರ ಬೆಳಗ್ಗೆ ಪೂಂಚ್ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದ್ದು, ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಈ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರೆದಿದೆ" ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ಗಳ ಹಾರಾಟ ಹೆಚ್ಚಾಗಿದೆ. ಕಳೆದ ತಿಂಗಳ ಜೂನ್ 5ರಂದು ಅಮೃತಸರ ಬಳಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದರು. ಜೂನ್ 5ರ ಬೆಳಗ್ಗೆ 9.45 ರ ಸುಮಾರಿಗೆ ಸೈನಿಕರಿಗೆ ಪಾಕಿಸ್ತಾನದ ಡ್ರೋನ್ ಹಾರಾಟದ ಸದ್ದು ಕೇಳಿಸಿತು. ಬಳಿಕ, ಗಡಿಯಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಡ್ರೋನ್ ಮೇಲೆ ಯಶಸ್ವಿ ಗುಂಡಿನ ದಾಳಿ ನಡೆಸಿದವು.
ಇದಾದ ಬಳಿಕ ಜೂನ್ 9ರಂದು ಅಮೃತಸರದ ರಾಯ್ಗ್ರಾಮದಲ್ಲಿ ಸುಮಾರು ಐದು ಕೆಜಿ ಹೆರಾಯಿನ್ ಅನ್ನು ಬಿಎಸ್ಎಫ್ ಯೋಧರು ವಶಪಡಿಸಿಕೊಂಡಿದ್ದರು. ಪಾಕಿಸ್ತಾನದ ಡ್ರೋನ್‌ಗಳ ಮೂಲಕ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳಿಗೆ ಡ್ರೋನ್‌ಗಳು ಗಡಿಯೊಳಗೆ ಪ್ರವೇಶಿಸಿ ಏನನ್ನೋ ಬೀಳಿಸುವ ಶಬ್ದ ಕೇಳಿಸಿತು. ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದರು.