ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರೆದಿದೆ. ಇದೀಗ ಎರಡು ಪ್ರತ್ಯೇಕ ಘಟನೆಗಳಲ್ಲಿ ಚೆನ್ನೈನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಮತ್ತು ವಿಲ್ಲುಪುರಂನಲ್ಲಿ ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆನ್ನೈನ ತಿರುವೆಕಾಡು ಸಮೀಪದ ಹಾಸ್ಟೆಲ್‌ನೊಂದಿಗೆ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾರೆ. ಬಾಲಕಿಯರ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್ ಒಟ್ಟಿಗೆ ಕಾರ್ಯನಿರ್ವಹಿಸುತ್ತಿವೆ. ಈ ಕಾಲೇಜಿನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್ ಮೇಲಿನ ಮಹಡಿಯಲ್ಲಿದ್ದರೆ, ಕಾಲೇಜುಅನ್ನು ಕೆಳ ಮಹಡಿಯಲ್ಲಿ ನಡೆಸಲಾಗುತ್ತಿದೆ.
ಜುಲೈ 30ರಂದು ಮಧ್ಯಾಹ್ನದ ಊಟದ ಸಮಯದಲ್ಲಿ ವಿದ್ಯಾರ್ಥಿನಿ ಹಾಸ್ಟೆಲ್ನ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದಿನಂತೆ ತಮ್ಮ ಸ್ನೇಹಿತೆಯರೊಂದಿಗೆ ಈ ವಿದ್ಯಾರ್ಥಿನಿ ಕೂಡ ಊಟ ಹೋಗಬೇಕಿತ್ತಂತೆ. ಆದರೆ, ನೀವು ಮೊದಲು ಹೋಗಿ ನಾನು ಬರುತ್ತೇನೆ ಎಂದು ಹೇಳಿ ಈ ವಿದ್ಯಾರ್ಥಿನಿ ಕೊಠಡಿಗೆ ಬಂದಿದ್ದರು. ಆದರೆ, ಇದಾದ ಸುಮಾರು ಹೊತ್ತು ಕಳೆದರೂ ಕೊಠಡಿಯಿಂದ ಬಂದಿಲ್ಲ. ಹೀಗಾಗಿ ಸ್ನೇಹಿತೆಯರು ಕೊಠಡಿಗೆ ಬಂದು ನೋಡಿದ್ದು, ಇಷ್ಟರಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಅಂತೆಯೇ ವಿದ್ಯಾರ್ಥಿನಿ ಆತ್ಮಹತ್ಯೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿನಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ, ಮಗಳ ಸಾವಿನ ಬಗ್ಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಇತ್ತ, ವಿದ್ಯಾರ್ಥಿನಿ ಸಾವಿಗೆ ಪ್ರೇಮ ಪ್ರಕರಣ ಅಥವಾ ಖಿನ್ನತೆಗೆ ಒಳಗಾಗಿ ಹೀಗೆ ಮಾಡಿಕೊಂಡಿದ್ದಾಳೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ: ಇದರ ಬೆನ್ನಲ್ಲೇ ವಿಲ್ಲುಪುರಂನ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಕೂಡ ಜುಲೈ 30ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿನಿ ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ಆಪರೇಷನ್ ಮಾಡಲಾಗಿದ್ದು, ವಿಲ್ಲುಪುರಂ ಮುಂಡಿಯಂಬಕ್ಕಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ವಿದ್ಯಾರ್ಥಿನಿ ತನ್ನ ತಂದೆಯನ್ನು ನೋಡಲು ಆಸ್ಪತ್ರೆಗೆ ಬರುತ್ತಿರುವುದಾಗಿ ತಾಯಿಗೆ ತಿಳಿಸಿದ್ದರು. ಆದರೆ, ಇಲ್ಲಿಗೆ ಬರಬೇಡ ಎಂದು ತಾಯಿ ಹೇಳಿದ್ದರು. ಇದಾದ ನಂತರ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ. ಆದರೆ, ಈ ವಿದ್ಯಾರ್ಥಿನಿಯ ಆತ್ಮಹತ್ಯೆ ಬಗ್ಗೆಯೂ ನಿಖರವಾದ ಕಾರಣ ತಿಳಿದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ.. ಮೊಬೈಲ್ ಸಂಖ್ಯೆ ಪಾಕ್ನಲ್ಲಿ ಆ್ಯಕ್ಟಿವ್