ಅಹಮದಾಬಾದ್/ಜುನಾಗಢ:ಉತ್ತರಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ಗುಜರಾತ್ನಲ್ಲೂ ವರುಣಾರ್ಭಟ ಜೋರಾಗಿದೆ. ಸೋಮವಾರ ಒಂದೇ ದಿನ ಹಲವೆಡೆ ಕಟ್ಟಡಗಳು ಕುಸಿದ ಘಟನೆಗಳು ವರದಿಯಾಗಿವೆ. ಜುನಾಗಢದಲ್ಲಿ ಎರಡು ಅಂತಸ್ತಿನ ಕಟ್ಟಡ ಧರಾಶಾಹಿಯಾಗಿದ್ದು, ಅದರಲ್ಲಿ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ದುರಂತ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ 10 ಜನರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇತ್ತ ಅಹಮದಾಬಾದ್‌ನಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡ ಕುಸಿದಿದ್ದು, ಅದರಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಗಿದೆ.
ಜುನಾಗಢದ ಅವಘಡ:ಜುನಾಗಢ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಡಿಯವಾಡ ಪ್ರದೇಶದಲ್ಲಿ ಎರಡು ಅಂತಸ್ತಿನ ಹಳೆಯ ಮನೆಯೊಂದು ಏಕಾಏಕಿ ಧರಾಶಾಯಿಯಾಗಿದೆ. ಇದು ಮಾರುಕಟ್ಟೆ ಪ್ರದೇಶವಾಗಿದ್ದು, ಜನರು ಮಳೆಯ ನಡುವೆಯೂ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಕಟ್ಟಡ ನಿವಾಸಗಳ ಜೊತೆಗೆ ಅಂಗಡಿ ಮುಂಗಟ್ಟುಗಳನ್ನೂ ಹೊಂದಿದೆ. ಹೀಗಾಗಿ ಜನರು ಅವಶೇಷಗಳಡಿ ಸಿಲುಕಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ನಾಲ್ವರು ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ.
ಮಾಹಿತಿ ತಿಳಿದ ತಕ್ಷಣವೇ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ. ಸ್ಥಳೀಯರ ಜೊತೆಗೂಡಿ, ಜೆಸಿಬಿಗಳನ್ನು ಬಳಸಿ ಅವಶೇಷಗಳ ತೆರವು ಮಾಡಲಾಗುತ್ತಿದೆ. ಈವರೆಗೆ ಯಾರೂ ಪತ್ತೆಯಾಗಿಲ್ಲ. ಮಾರುಕಟ್ಟೆ ಮಧ್ಯೆ ಇರುವ ಕಟ್ಟಡ ಇದಾಗಿದ್ದು, ತುಂಬಾ ಹಳೆಯದು ಎಂದು ಹೇಳಲಾಗಿದೆ. ಮೇಲ್ಭಾಗದಲ್ಲಿ ಜನರ ನಿವಾಸಗಳು ಮತ್ತು ಕೆಳಭಾಗದಲ್ಲಿ ಅಂಗಡಿಗಳು ಇದ್ದವು ಎಂದು ತಿಳಿದು ಬಂದಿದೆ.