ಭಿವಂಡಿ (ಮಹಾರಾಷ್ಟ್ರ):ಎರಡು ಅಂತಸ್ತಿನ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದು 8 ತಿಂಗಳ ಮಗು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಭಿವಂಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಅಗ್ನಿಶಾಮಕ ದಳ, ವಿಪತ್ತು ಸ್ಪಂದನಾ ಪಡೆ ಘಟನಾ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಧಿಕೃತ ಸುದ್ದಿಮೂಲಗಳ ಪ್ರಕಾರ, ಗೌರಿಪಾದ ಸಾಹಿಲ್ ಹೋಟೆಲ್ ಪ್ರದೇಶದಲ್ಲಿರುವ ಕಟ್ಟಡದ ಒಂದು ಭಾಗ ಕುಸಿದಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಸಿದು ಬಿದ್ದ ಅಬ್ದುಲ್ ಬಾರಿ ಜನಾಬ್ ಎಂಬ ಹೆಸರಿನ ಕಟ್ಟಡ ಅಂದಾಜು 40 ವರ್ಷಗಳಷ್ಟು ಹಳೆಯದ್ದು ಎಂದು ತಿಳಿದುಬಂದಿದೆ. ನೆಲ ಅಂತಸ್ತಿನಲ್ಲಿ ಮಗ್ಗದ ಕಾರ್ಖಾನೆ ಇದೆ. ಇದರ ಮೇಲಿನ ಎರಡು ಅಂತಸ್ತುಗಳಲ್ಲಿ ಜನರು ವಾಸವಿದ್ದರು. ಮಧ್ಯರಾತ್ರಿ ದಿಢೀರ್ ಹಿಂಬದಿಯ ಮೇಲ್ಛಾವಣಿ ಕುಸಿದಿದೆ. ಪರಿಣಾಮ ಮೊದಲ ಮಹಡಿಯಲ್ಲಿದ್ದ ಕುಟುಂಬ ಅವಶೇಷಗಳಡಿ ಸಿಲುಕಿತ್ತು. ಸ್ಥಳೀಯರ ಸಹಾಯದಿಂದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಒಟ್ಟು 7 ಮಂದಿಯನ್ನು ಹೊರತೆಗೆಯಲಾಗಿದೆ. ತಕ್ಷಣಕ್ಕೆ ಆಂಬ್ಯುಲೆನ್ಸ್ ಲಭ್ಯವಿರದ ಕಾರಣ ಗಾಯಾಳುಗಳನ್ನು ರಿಕ್ಷಾದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಮುಂದುವರೆದಿದೆ ಎಂದು ಅಗ್ನಿಶಾಮಕ ಅಧಿಕಾರಿ ಸುಧಾಕರ ಪವಾರ್ ತಿಳಿಸಿದರು.
ಜುನಾಗಢ್ನಲ್ಲಿ ಕಟ್ಟಡ ಕುಸಿತ: ಗುಜರಾತ್ನ ಜುನಾಗಢದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ 40 ವರ್ಷದ ಹಳೆಯ ಶಿಥಿಲ ಕಟ್ಟಡ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಸಾವನ್ನಪ್ಪಿದ ನಾಲ್ವರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದರು.