ದೇವಾಸ್ (ಮಧ್ಯಪ್ರದೇಶ): ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಹೊರಟಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿ ತಮ್ಮ ಪುತ್ರಿಯೊಂದಿಗೆ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ:ರಾಮನಗರ: ಪ್ರೀತಿ ನಿರಾಕರಿಸಿದ್ದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ್ದ ಮೆಕ್ಯಾನಿಕ್ ಬಂಧನ
ಇಲ್ಲಿನ ಖಟೆಗಾಂವ್ನ ನಿವಾಸಿ ರಾಜೇಶ್ ರಾಥೋಡ್, ಪತ್ನಿ ಸುನೀತಾ ಹಾಗೂ ಪುತ್ರಿ ವೈಶಾಲಿ ಎಂಬುವವರೇ ಮೃತರು ಎಂದು ಗುರುತಿಸಲಾಗಿದೆ. ಖಟೆಗಾಂವ್ - ನೇಮಾವರ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ದಂಪತಿ ಹಾಗೂ ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ನೇಮಾವರದ ಪ್ರಸಿದ್ಧ ಶಿವನ ದೇವಾಲಯದಾದ ಸಿದ್ದೇಶ್ವರರ ದರ್ಶನಕ್ಕೆ ಈ ದಂಪತಿ ಹೊರಟಿದ್ದರು. ಈ ವೇಳೆ ರಾಮನಗರದ ಬಳಿ ಎದುರಿನಿಂದ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ, ಮೂವರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ವೇಳೆ ಮೂವರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯರ ಪ್ರಕಾರ ಮಾಹಿತಿ, ರಾಜೇಶ್ ಮೊದಲು ಸಾವನ್ನಪ್ಪಿದರು. ಇದರ ಬಳಿಕ ಪತ್ನಿ ಸುನೀತಾ ಕೊನೆಯುಸಿರೆಳೆದರು. ಇದಾದ ಕೆಲವೇ ಕ್ಷಣಗಳಲ್ಲಿ ಮಗಳು ವೈಶಾಲಿ ಉಸಿರು ಕೂಡ ನಿಂತಿತು ಎಂದು ಗೊತ್ತಾಗಿದೆ. ಸದ್ಯ ಈ ಅಪಘಾತಕ್ಕೆ ಕಾರಣವಾದ ಕಾರಿನ ಸಂಖ್ಯೆಯನ್ನು ಎಂಪಿ12 - ಸಿಎ 9088 ಪತ್ತೆ ಹಚ್ಚಲಾಗಿದೆ. ಆದರೆ, ಆರೋಪಿ ಕಾರು ಚಾಲಕ ಪರಾರಿಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.