ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಉದ್ರಿಕ್ತರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಯೋಧ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ ರಾಜಧಾನಿ ಇಂಫಾಲ್‌ನಿಂದ 50 ಕಿ.ಮೀ ದೂರದಲ್ಲಿರುವ ಫೌಬಕ್‌ಚಾವೊ ಇಖೈ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಆರಂಭವಾದ ಗುಂಡಿನ ದಾಳಿ ಶುಕ್ರವಾರ ಬೆಳಗಿನ ಜಾವದ ವರೆಗೆ ಸುಮಾರು 15 ಗಂಟೆಗಳ ಕಾಲ ಮುಂದುವರೆದಿತ್ತು.
ಈ ವೇಳೆ, ಸಮೀಪದ ತೇರಾ ಖೊಂಗ್ಸಾಂಗ್ಬಿಯಲ್ಲಿ ಜನರಿಲ್ಲದೇ ಖಾಲಿ ಇದ್ದ ಒಂದು ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಗಾಯಗೊಂಡಿರುವವರನ್ನು ಮಣಿಪುರ ಪೊಲೀಸ್ ಕಮಾಂಡೋ ನಮೀರಕ್ಪಾಮ್ ಇಬೊಮ್ಚಾ(40) ಹಾಗೂ ಸೇನಾ ಯೋಧ ಕುಮಾನ್ ಎಂದು ಗುರುತಿಸಲಾಗಿದೆ. ನಮೀರಕ್ಪಾಮ್ ಅವರ ಬಲಗಾಲು ಮತ್ತು ಬಲ ಕಿವಿಯ ಮೇಲೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:Manipur Violence: ಮಣಿಪುರದಲ್ಲಿ 10 ಮನೆಗಳು, ಶಾಲೆಗೆ ಬೆಂಕಿ ಹಚ್ಚಿದ ಶಸ್ತ್ರಸಜ್ಜಿತ ಮಹಿಳಾ ಬಂಡುಕೋರರ ಗುಂಪು
ಡ್ರೋನ್ ಕಾರ್ಯಾಚರಣೆ: ಘಟನೆ ನಡೆದ ಸುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪ್ರದೇಶದ ಮೇಲೆ ಹಾರಾಡಿದ ಡ್ರೋನ್ ಉದ್ರಿಕ್ತರು ತಮ್ಮ ಕೆಲವು ಸಹಚರರನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿದೆ. ಆದರೆ ಆ ದಂಗೆಕೋರರು ಗಾಯ ಗೊಂಡಿದ್ದಾರೆಯೇ ಅಥವಾ ಕೊಲ್ಲಲ್ಪಟ್ಟಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಮೈತೇಯಿ ಮತ್ತು ಕುಕಿ ಸಮುದಾಯದ ನಡುವಿನ ಜನಾಂಗೀಯ ಸಂಘರ್ಷ ಹಲವು ಅಹಿತಕರ ಘಟನೆಗಳಿಗೆ ಕಾರಣವಾಗಿದೆ. ಅಂದಿನಿಂದ ಈವರೆಗೆ 160ಕ್ಕೂ ಹೆಚ್ಚು ಜನ ಸಂಘರ್ಷಕ್ಕೆ ಬಲಿಯಾಗಿದ್ದಾರೆ. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯ ವಿರುದ್ಧ ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಲಾಗಿತ್ತು. ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಇದನ್ನೂ ಓದಿ:Manipur Violence: ವದಂತಿ, ಸುಳ್ಳು ಸುದ್ದಿ ಮಣಿಪುರ ಹಿಂಸಾಚಾರ ತೀವ್ರಗೊಳ್ಳಲು ಪ್ರಮುಖ ಕಾರಣ: ಅಧಿಕಾರಿಗಳ ಹೇಳಿಕೆ
ಹಲವು ಅಹಿತಕರ ಘಟನೆಗಳಿಗೂ ಸಾಕ್ಷಿ: ಈ ನಡುವೆ ಇಬ್ಬರು ಬುಡಕಟ್ಟು ಮಹಿಳೆಯರನ್ನು ಮೆರವಣಿಗೆ ಮಾಡಿದ ಘಟನೆ ಬೆಳಕಿಗೆ ಬಂದು ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು. ಮೇ 4ರಂದು ಕಾಂಗ್‌ಪೊಕ್ಸಿ ಜಿಲ್ಲೆಯ ಫೈನೋಮ್ ಗ್ರಾಮದಲ್ಲಿ ಈ ಆಘಾತಕಾರಿ ಮತ್ತು ಭಯಾನಕ ಘಟನೆಯ ನಡೆದಿತ್ತು. ಇದು ಮತ್ತಷ್ಟು ಆಕ್ರೋಶದ ಜ್ವಾಲೆಯನ್ನೂ ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಸಜೀವವಾಗಿ ದಹನ ಮಾಡಿರುವ ಘಟನೆಯೂ ವರದಿಯಾಗಿತ್ತು. ಕಾಕ್ಚಿಂಗ್ ಜಿಲ್ಲೆಯ ಸೆರೋ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಸಶಸ್ತ್ರ ಗುಂಪೊಂದು ಸಜೀವ ದಹನ ಮಾಡಿರುವುದು ಬಯಲಾಗಿತ್ತು. ಮೇ 28ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ:ಮಣಿಪುರ: ಮತ್ತೊಂದು ಹೃದಯ ವಿದ್ರಾವಕ ಘಟನೆ.. ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಜೀವಂತ ದಹಿಸಿದ ಸಶಸ್ತ್ರ ಗುಂಪು