ಅಯೋಧ್ಯಾ( ಉತ್ತರಪ್ರದೇಶ): ಭಗವಾನ್ ರಾಮಲಲ್ಲಾನ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀರಾಮನ ಸ್ಥಿರ ವಿಗ್ರಹದ ನಿರ್ಮಾಣಕ್ಕೆ ಯಾವ ಕಲ್ಲುಬಂಡೆಗಳನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ನೇಪಾಳದ ಕಾಳಿ ಗಂಡಕಿ ನದಿಯಿಂದ ತಂದ ದೇವ ಶಿಲಾವನ್ನು ಪೂಜೆಯ ನಂತರ ಅಯೋಧ್ಯೆಯ ರಾಮಸೇವಕ ಪುರಂನಲ್ಲಿ ಇರಿಸಲಾಗಿದೆ. ಹಾಗೆಯೇ ಈಗ ಕರ್ನಾಟಕದ ಮೈಸೂರಿನಿಂದ ಅಯೋಧ್ಯೆಗೆ ಎರಡು ಬಗೆಯ ಶಿಲಾ ಬಂಡೆಗಳು ಆಗಮಿಸಿವೆ. ಇವುಗಳಲ್ಲಿ ಒಂದು ಕಪ್ಪು ಬಣ್ಣದ್ದಾಗಿದ್ದರೆ ಮತ್ತೊಂದು ಒಳಗಿನಿಂದ ಹಳದಿ ಬಣ್ಣದ್ದಾಗಿದೆ.
ವಾಸ್ತು ವಿಜ್ಞಾನಿಗಳಿಂದ ಬಂಡೆಗಳ ಪರಿಶೀಲನೆ:ಈ ಬಂಡೆಗಳನ್ನು ಸಹ ರಾಮಸೇವಕ ಪುರಂನಲ್ಲಿರುವ ದೇವ ಶಿಲೆಗಳ ಬಳಿ ಇರಿಸಲಾಗಿದೆ. ವಿಗ್ರಹದ ಆಕಾರ ಮತ್ತು ಗಾತ್ರದ ಬಗ್ಗೆ ಶಿಲ್ಪಕಲಾ ತಜ್ಞರು ನಿರಂತರವಾಗಿ ವಿಚಾರ ಮಂಥನ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದೇವರ ಪ್ರತಿಷ್ಠಾಪನೆಗಾಗಿ ಕಲ್ಲುಗಳನ್ನು ಪರೀಕ್ಷಿಸಿ ಆಯ್ಕೆ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕರ್ನಾಟಕದ ಮೈಸೂರಿನಿಂದ, ಪೂಜಿಸಲ್ಪಟ್ಟ ಎರಡು ಶಿಲಾ ಬಂಡೆಗಳು ಮಂಗಳವಾರ ಅಯೋಧ್ಯೆಗೆ ತಲುಪಿವೆ. ವಾಸ್ತು ವಿಜ್ಞಾನಿಗಳು ಬಂಡೆಗಳನ್ನು ಪರಿಶೀಲಿಸುತ್ತಿದ್ದಾರೆ.
’ಭಾರತದ ಹಲವು ಕಡೆಗಳಿಂದ ಉತ್ತಮ ಬಂಡೆಗಳನ್ನ ತರಿಸಲಾಗುತ್ತಿದೆ’:ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ಭಾರತದಲ್ಲಿ ಇಂಥ ಕಲ್ಲುಗಳು ಎಲ್ಲೆಲ್ಲಿ ಲಭ್ಯವಿವೆಯೋ ಅವೆಲ್ಲವನ್ನೂ ಇಲ್ಲಿಗೆ ತರಿಸಲಾಗುತ್ತಿದೆ. ಈ ಕಲ್ಲುಗಳಿಂದಲೇ ವಿಗ್ರಹಗಳನ್ನು ತಯಾರಿಸಲಾಗುವುದು ಎಂಬ ಕಡ್ಡಾಯವೇನಿಲ್ಲ. ಕಲ್ಲುಗಳನ್ನು ಸರಿಪಡಿಸಿದ ನಂತರ ಆ ಕಲ್ಲಿನಿಂದ ಪ್ರತಿಮೆ ಮಾಡಬಹುದೇ ಅಥವಾ ಬೇಡವೇ ಎಂಬುದನ್ನು ಶಿಲ್ಪಕಲಾ ತಜ್ಞರು ನಿರ್ಧರಿಸುತ್ತಾರೆ. ಎಲ್ಲ ಕಲ್ಲುಗಳನ್ನು ಸಂಗ್ರಹಿಸಿದ ನಂತರ ಅವನ್ನು ಮೂರ್ತಿ ತಯಾರಕರಿಗೆ ತೋರಿಸಲಾಗುತ್ತದೆ. ಶಿಲ್ಪಕಲಾ ತಜ್ಞರ ಒಪ್ಪಿಗೆ ದೊರೆತ ನಂತರವೇ ರಾಮಲಲ್ಲಾ ವಿಗ್ರಹ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.