ಬಿಹಾರದಲ್ಲಿ ಪ್ರಯಾಣಿಕನಿಗೆ ಥಳಿಸಿದ ಇಬ್ಬರು ರೈಲ್ವೇ ಅಧಿಕಾರಿಗಳು ಮುಜಾಫರ್‌ಪುರ (ಬಿಹಾರ):ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಜಯನಗರಕ್ಕೆ ಹೋಗುವ ಪವನ್ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಇಲ್ಲದೇ ಕಾಯ್ದಿರಿಸಿದ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ದಾಳಿ ನಡೆಸಿದ ಬಿಹಾರದ ಇಬ್ಬರು ರೈಲ್ವೆ ಅಧಿಕಾರಿಗಳನ್ನು ಭಾರತೀಯ ರೈಲ್ವೆ ಅಮಾನತುಗೊಳಿಸಿ ಆದೇಶ ನೀಡಿದೆ.
ಪೂರ್ವ ಮಧ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, ಈ ಘಟನೆ ಜನವರಿ 2 ರಂದು ನಡೆದಿದೆ. ಇಬ್ಬರು ಅಧಿಕಾರಿಗಳು ಸೇರಿ ಒಬ್ಬ ಪ್ರಯಾಣಿಕನನ್ನು ಎಳೆಯುತ್ತಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯ ರೈಲ್ವೇಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ವಿಡಿಯೊ ವೈರಲ್ ಆದ ತಕ್ಷಣ, ಸಮಸ್ತಿಪುರ ರೈಲ್ವೆ ವಿಭಾಗದ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ. ಮತ್ತು ಇಬ್ಬರು ರೈಲು ಟಿಕೆಟ್ ಚೆಕ್ಕರ್ (ಟಿಟಿಇ) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಒಬ್ಬನಿಗೆ ಇನ್ನೊಬ್ಬ ಟಿಟಿಇ ಸಾಥ್: ಇಬ್ಬರು ಟಿಟಿಇಗಳನ್ನು ಗೌತಮ್ ಕುಮಾರ್ ಮತ್ತು ರಮೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಚಿಕ್ಕ ವಿಡಿಯೊ ಕ್ಲಿಪ್‌ನಲ್ಲಿ, ಸ್ಲೀಪರ್ ಕೋಚ್‌ನ ಮೇಲಿನ ಬರ್ತ್‌ನಲ್ಲಿ ಕುಳಿತುಕೊಂಡಿದ್ದ ಪ್ರಯಾಣಿಕನಿಗೆ ಟಿಕೆಟ್ ಚೆಕ್ಕರ್‌ಗಳಲ್ಲಿ ಒಬ್ಬರು ಮುಖಕ್ಕೆ ಒದೆಯುತ್ತಿದ್ದರೆ, ಇನ್ನೊಬ್ಬರು ಆತನನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಒಂದು ಕೈಯಿಂದ ಅವನ ಇನ್ನೊಂದು ಕಾಲನ್ನು ಹಿಡಿದು ಎಳೆದಾಡುತ್ತಿದ್ದಾರೆ. ಇನ್ನೊಬ್ಬರು ಅವನ ಜಾಕೆಟ್ ತೋಳುಗಳನ್ನು ಹಿಡಿದು ಎಳೆಯುತ್ತಿದ್ದಾರೆ.
ಕಾನೂನು ಕೈಗೆ ತೆಗೆದುಕೊಂಡ ರೈಲ್ವೆ ಅಧಿಕಾರಿಗಳು: ಒಬ್ಬ ಟಿಟಿಇ ಅಧಿಕಾರಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಕಾಲನ್ನು ಹಿಡಿದು ಎಳೆಯುತ್ತಿರುವಾಗ ಪ್ರಯಾಣಿಕ ಜಗ್ಗದೇ ಇದ್ದದ್ದನ್ನು ಕಂಡು ಕೋಪಗೊಂಡ ಇನ್ನೊಬ್ಬ ಅಧಿಕಾರಿಯೂ ಆತನ ಜೊತೆಗೂಡಿ ಪ್ರಯಾಣಿಕನ ಕಾಲನ್ನು ಹಿಡಿದು ಎಳೆಯಲು ಪ್ರಾರಂಭಿಸಿದ್ದಾನೆ. ಬರ್ತ್ನಿಂದ ಕೆಳಗೆ ಎಳದು ಹಾಕಿ ನೆಲದಲ್ಲಿ ಬಿದ್ದ ಪ್ರಯಾಣಿಕನಿಗೆ ಇಬ್ಬರು ಅಧಿಕಾರಿಗಳು ತಮ್ಮ ಬೂಟುಗಳಿಂದ ಮುಖ ಸೇರಿದಂತೆ ಎಲ್ಲ ಕಡೆ ಒದೆಯಲು ಪ್ರಾರಂಭಿಸಿದ್ದಾರೆ.
ಪ್ರಯಾಣಿಕ ಎಷ್ಟು ಪ್ರತಿರೋಧಿಸಿದರೂ ನಿಲ್ಲಿಸದ ಅಧಿಕಾರಿಗಳು ಆತನಿಗೆ ಗಾಯಗಳಾಗುವಂತೆ ಹೊಡೆದಿದ್ದಾರೆ. ಇದನ್ನು ನೋಡುತ್ತಿದ್ದ ಇತರ ಸಹಪ್ರಯಾಣಿಕರು ಕೊನೆಗೆ ಮಧ್ಯಪ್ರವೇಶಿಸಿ ಇಬ್ಬರು ಟಿಕೆಟ್ ಚೆಕ್ಕರ್ಗಳನ್ನು ತಡೆದು ನಿಲ್ಲಿಸಿದ್ದಾರೆ. ಈ ಎಲ್ಲ ದೃಶ್ಯವನ್ನು ಅಲ್ಲೇ ಇದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.
ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು: ಈ ಬಗ್ಗೆ ಮಾತನಾಡಿರುವ ಸಿಪಿಆರ್‌ಒ, 'ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದಕ್ಕಾಗಿ ಆತನಿಗೆ ದಂಡ ವಿಧಿಸಿದ್ದಾರೆ. ದಂಡ ಪಾವತಿಸಿದ ನಂತರ ಅವರು ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಸಿದ್ದಾರೆ. ಆ ಮಟ್ಟಿಗೆ ಅವರು ನಿಯಮಗಳ ಪ್ರಕಾರ ನಡೆದುಕೊಂಡಿದ್ದಾರೆ. ಆದರೆ, ಅವರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ' ಎಂದು ರೈಲ್ವೆಸ್ ನೀಡಿರುವ ಸ್ಪಷ್ಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಲಂಚ ಪ್ರಕರಣ: ರೈಲ್ವೆ ಉಪ ಮುಖ್ಯ ಇಂಜಿನಿಯರ್ನ ಬಂಧನ.. 2 ಕೋಟಿ ರೂ ವಶಕ್ಕೆ