ರಂಗಪಾರ( ಅಸ್ಸೋಂ):ಅಸ್ಸೋಂನಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಇಲ್ಲಿನ ಕಂಪುರದಲ್ಲಿ ಪ್ರವಾಹಕ್ಕೆ ಸಿಲುಕಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಸೋನಿತ್‌ಪುರ ಜಿಲ್ಲೆಯ ಮಿಸಾಮರಿಯಲ್ಲಿ ಲೋಕೋಪಯೋಗಿ ಇಲಾಖೆಯ ಸುಸಜ್ಜಿತ ಪ್ರಮುಖ ರಸ್ತೆ ಸುಮಾರು 300 ಮೀಟರ್ ಕೊಚ್ಚಿ ಹೋಗಿದೆ.
ಭಾನುವಾರ ರಾತ್ರಿ ಮಧ್ಯ ಅಸ್ಸೋಂ ನಾಗಾನ್ ಜಿಲ್ಲೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕಂಪುರದ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ನೇತೃತ್ವದಲ್ಲಿ ಪ್ರಕರಣವೊಂದರ ತನಿಖೆಗೆ ಹೋದಾಗ, ಪ್ರಭಾರ ಅಧಿಕಾರಿ ಸೇರಿದಂತೆ ತಂಡದ ಇಬ್ಬರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕಾನ್‌ಸ್ಟೇಬಲ್ ಒಬ್ಬರ ಶವ ಪತ್ತೆಯಾಗಿದೆ. ಆದರೆ, ಕಂಪುರ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆಗಳು:ಇನ್ನು ಬೆಲ್‌ಶಿರಿ ನದಿಯ ಪ್ರವಾಹದ ನೀರು ಬಾರ್ಬಿಲ್ ಕಚಾರಿ ಗ್ರಾಮದ ಮಿಸಾಮರಿ - ಬೆಲ್‌ಶಿರಿ-ಧೆಕಿಯಾಜುಲಿ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಕೊಚ್ಚಿಕೊಂಡು ಹೋಗಿದೆ. ಬೇರೆ ಪರ್ಯಾಯ ಮಾರ್ಗವಿಲ್ಲದ ಕಾರಣ ನಿತ್ಯ ಬಜಾರ್, ಗರುಭಂಡ ಸರಕಾರಿ ಆಸ್ಪತ್ರೆ, ಮಿಸಾಮರಿ ಪೊಲೀಸ್ ಠಾಣೆ, ಗರುಭಂಡ ಗಾಂವ್ ಪಂಚಾಯಿತಿ ಜನ ರಸ್ತೆ ಸಂಪರ್ಕ ಇಲ್ಲದೇ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.