ಚಿರಾಂಗ್/ಲಖಿಂಪುರ (ಅಸ್ಸೋಂ) :ಅಸ್ಸೋಂನಲ್ಲಿ ಕಾಡುಪ್ರಾಣಿ ಬೇಟೆ ಮತ್ತು ಡ್ರಗ್ ದಂಧೆಗೆ ಓರ್ವ ಬಲಿಯಾಗಿದ್ದರೆ, ಇನ್ನೊಬ್ಬ ಗುಂಡೇಟಿಗೆ ತೀವ್ರವಾಗಿ ಗಾಯಗೊಂಡಿದ್ದಾನೆ. ಭಾನುವಾರ ರಾತ್ರಿ ಒಂದೇ ದಿನ ನಡೆದ ಪ್ರತ್ಯೇಕ ಎನ್ಕೌಂಟರ್ನಲ್ಲಿ ಪೊಲೀಸರು ಆರೋಪಿಯನ್ನು ಹೊಡೆದುರುಳಿಸಿದ್ದಾರೆ. ಲಖಿಂಪುರ ಮತ್ತು ಚಿರಾಂಗ್ ಜಿಲ್ಲೆಗಳಲ್ಲಿ ಈ ಎರಡು ಎನ್‌ಕೌಂಟರ್‌ಗಳು ನಡೆದಿವೆ.
ತಪ್ಪಿಸಿಕೊಳ್ಳುವಾಗ 'ಬೇಟೆ':ಚಿರಾಂಗ್ ಜಿಲ್ಲೆಯ ಜಲುಕಾನಿ ಎಂಬಲ್ಲಿ ಕಳ್ಳ ಬೇಟೆಗಾರರ ಸೆರೆ ಹಿಡಿಯುವ ವೇಳೆ ಬಂಧಿತ ಬೇಟೆಗಾರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್‌ಕೌಂಟರ್ ನಡೆಸಲಾಗಿದೆ. ಜಲುಕಾನಿ ಭಾರತ ಮತ್ತು ಭೂತಾನ್ ಗಡಿ ಭಾಗದಲ್ಲಿದೆ. ಘೇಂಡಾಮೃಗಗಳು ಮತ್ತು 40 ಕಾಡು ಆನೆಗಳ ಹತ್ಯೆಯಲ್ಲಿ ಭಾಗಿಯಾಗಿರುವ ಮೂವರು ಬೇಟೆಗಾರರ ಪೈಕಿ ಓರ್ವನನ್ನು ಬಂಧಿಸಲಾಗಿದೆ.
ಉಳಿದವರ ಬೇಟೆಗಾಗಿ ಪೊಲೀಸರು ಬಂಧಿತನ ನೆರವಿನಿಂದ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾಗ, ಬಂಧಿತ ಬೇಟೆಗಾರ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸೆರೆಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಬೇಟೆಗಾರನಿಗೆ ತಾಕಿ ಗಂಭೀರ ಗಾಯಗೊಂಡು ಆತ ಅರಣ್ಯದಲ್ಲೇ ಸಾವನ್ನಪ್ಪಿದ್ದಾನೆ. ಇದೇ ವೇಳೆ, ಇನ್ನಿಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎನ್‌ಕೌಂಟರ್ ಬಳಿಕ ಅಸ್ಸೋಂ ಪೊಲೀಸ್ ಮಹಾನಿರ್ದೇಶಕ ಜಿ ಪಿ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಘೇಂಡಾಮೃಗದ ಚಿತ್ರ ಅಪ್ಲೋಡ್ ಮಾಡುತ್ತಿದ್ದಾರೆ. 'ಅಸ್ಸೋಂ ಪೊಲೀಸರು ನಿಮ್ಮ ಜೊತೆಗಿದ್ದಾರೆ, ಸುರಕ್ಷಿತವಾಗಿರಿ' ಎಂದು ಬರೆದುಕೊಂಡಿದ್ದಾರೆ.