ಹೈದರಾಬಾದ್:ಇಲ್ಲಿನ ಮೇದಕ್ ಜಿಲ್ಲೆಯಲ್ಲಿ ವಾಯುಪಡೆಗೆ ಸೇರಿದ ತರಬೇತಿ ಹೆಲಿಕಾಪ್ಟರ್ ಇಂದು ಪತನಗೊಂಡಿದೆ. ಹೈದರಾಬಾದ್‌ನ ದುಂಡಿಗಲ್‌ನಿಂದ ಟೇಕ್‌ಆಫ್ ಆಗಿದ್ದ ಹೆಲಿಕಾಪ್ಟರ್, ತಾಂತ್ರಿಕ ದೋಷದಿಂದ ತುಪ್ರಾನ್ ಪುರಸಭೆ ವ್ಯಾಪ್ತಿಯ ರಾವೆಲ್ಲಿ ಉಪನಗರದಲ್ಲಿ ಧರೆಗಪ್ಪಳಿಸಿದೆ. ಪರಿಣಾಮ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಕುರಿತು ಮಾಹಿತಿ ದೊರೆತಿದೆ.
ಬೆಳಿಗ್ಗೆ 8.30ರ ಸುಮಾರಿಗೆ ಹೆಲಿಕಾಪ್ಟರ್ ಪತನಗೊಂಡಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಭಾರಿ ಪ್ರಮಾಣದಲ್ಲಿ ಶಬ್ದ ಕೇಳಿ ಬಂದಿದ್ದರಿಂದ ಸಾರ್ವಜನಿಕರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದರು.
ಹೆಲಿಕಾಪ್ಟರ್ನಲ್ಲಿ ಓರ್ವ ತರಬೇತುದಾರ, ಮತ್ತೊಬ್ಬರು ಟ್ರೈನಿ ಪೈಲಟ್ ಇದ್ದರು. ಸಮೀಪದ ದುಂಡಿಗಲ್‌ನಲ್ಲಿರುವ ಏರ್‌ಫೋರ್ಸ್ ಅಕಾಡೆಮಿಯಿಂದ (ಎಎಫ್‌ಎ) ಟೇಕಾಫ್ ಆಗಿತ್ತು. ಟೇಕಾಫ್ ಆದ ತಕ್ಷಣವೇ ಅಪಘಾತಕ್ಕೀಡಾಗಿದೆ.
ಸ್ಥಳದಲ್ಲಿ ಸುಟ್ಟು ಕರಕಲಾದ ಅವಶೇಷಗಳು ಕಂಡುಬಂದಿವೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಪೈಲಟ್‌ಗಳ ದೇಹದ ಅವಶೇಷಗಳಿವೆಯೇ ಎಂದು ಹುಡುಕಲಾಗುತ್ತಿದೆ ಎಂದು ಎಸ್ಪಿ ರೋಹಿಣಿ ತಿಳಿಸಿದರು.
ಪಿಲಾಟಸ್ ಪಿಸಿ 7 ಎಂಕೆ II ಎಂಬ ತರಬೇತಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಭಾರತೀಯ ವಾಯುಪಡೆ (ಐಎಎಫ್) ಆರಂಭದಲ್ಲಿ ತಿಳಿಸಿತ್ತು. ಎಕ್ಸ್ ಖಾತೆಯಲ್ಲಿ ಮೊದಲು ಮಾಹಿತಿ ಹಂಚಿಕೊಂಡಿದ್ದ ಐಎಎಫ್, ಹೈದರಾಬಾದ್‌ನ ಏರ್‌ಫೋರ್ಸ್ ಅಕಾಡೆಮಿಯಿಂದ ಟೇಕ್ ಆಫ್ ಆಗಿದ್ದ ಹೆಲಿಕಾಪ್ಟರ್, ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ಸದ್ಯಕ್ಕೆ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದು ಯಾವುದೇ ನಾಗರಿಕರ ಜೀವ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿತ್ತು.
ಬಳಿಕ ಮತ್ತೆ ಮಾಹಿತಿ ಹಂಚಿಕೊಂಡ ಐಎಎಫ್, ಅಪಘಾತಕ್ಕೀಡಾದ ತರಬೇತಿ ಹೆಲಿಕಾಪ್ಟರ್ನಲ್ಲಿ ಇಬ್ಬರು ಸಿಬ್ಬಂದಿ ಇದ್ದರು. ಬೆಂಕಿ ಹೊತ್ತಿಕೊಂಡಿದ್ದರಿಂದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಮೃತ ಪೈಲಟ್‌ಗಳಲ್ಲಿ ಒಬ್ಬ ಬೋಧಕ, ಮತ್ತೊಬ್ಬರು ಕೆಡೆಟ್ ಸೇರಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ಕೊಚ್ಚಿಯಲ್ಲಿ ಚೇತಕ್ ಹೆಲಿಕಾಪ್ಟರ್ ಪತನ: ನೌಕಾಪಡೆಯ ಅಧಿಕಾರಿ ಸಾವು