ಉದಯಪುರ/ಜಲಾವರ್:ರಾಜಸ್ಥಾನದಲ್ಲಿ ಶನಿವಾರ ವಿಧಾನಸಭಾ ಚುನಾವಣೆಗೆ ಮತದಾನದ ಸಂದರ್ಭದಲ್ಲಿ ಇಬ್ಬರು ವೃದ್ಧರು ಮತಗಟ್ಟೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಪ್ರತ್ಯೇಕ ಘಟನೆ ಉದಯಪುರ ಮತ್ತು ಜಲಾವರ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರೂ ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಶಂಕೆ ವ್ಯಕ್ತವಾಗಿದೆ.
ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದೆ. ರಾಜ್ಯದ 5.26 ಕೋಟಿ ಮತದಾರರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.68.24ರಷ್ಟು ಮತಗಳು ಚಲಾವಣೆಯಾಗಿದೆ. ಈ ಮಧ್ಯೆ, ಉದಯಪುರ ಮತ್ತು ಜಲಾವರ್ ಜಿಲ್ಲೆಗಳಿಂದ ಮತಗಟ್ಟೆಯಲ್ಲಿ ಇಬ್ಬರು ಆರೋಗ್ಯ ಹದಗೆಟ್ಟು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿದೆ. ಉದಯಪುರ ಜಿಲ್ಲೆಯ ಹಿರಾನ್ ಮ್ಯಾಗ್ರಿ ನಿವಾಸಿ, 69 ವರ್ಷದ ಸತ್ಯೇಂದ್ರ ಕುಮಾರ್ ಅರೋರಾ ಮತ್ತು ಜಲಾವರ್ ಜಿಲ್ಲೆಯ ಬಕಾನಿ ಪಟ್ಟಣ ನಿವಾಸಿ, 78 ವರ್ಷದ ಕನ್ಹಯ್ಯಾ ಲಾಲ್ ಮೃತರು ಎಂದು ಗುರುತಿಸಲಾಗಿದೆ.
ಸತ್ಯೇಂದ್ರ ಕುಮಾರ್ ಉದಯಪುರ ನಗರದ ಹಿರಾನ್ ಮ್ಯಾಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಆಂಥೋನಿ ಶಾಲೆಗೆ ಸೈಕಲ್ ಮತದಾನ ಮಾಡಲು ಬಂದಿದ್ದರು. ಈ ವೇಳೆ, ಏಕಾಏಕಿ ಆರೋಗ್ಯ ಹದಗೆಟ್ಟು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಷ್ಟರಲ್ಲಿ ಮತಗಟ್ಟೆಯಲ್ಲಿದ್ದ ಜನತೆ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮತ್ತೊಂದೆಡೆ, ಜಲಾವರ್ ಜಿಲ್ಲೆಯ ಖಾನ್‌ಪುರ ವಿಧಾನಸಭಾ ಕ್ಷೇತ್ರದ ಬಕಾನಿ ಪಟ್ಟಣದಲ್ಲಿ ಮತದಾನ ಮಾಡಲು ಬಂದಾಗ ಕನ್ಹಯ್ಯಾ ಲಾಲ್ ಕೂಡ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.