ಚೆನ್ನೈ:ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿಇಬ್ಬರು ಕುಖ್ಯಾತ ರೌಡಿಶೀಟರ್ಗಳು ಸಾವನ್ನಪ್ಪಿರುವ ಘಟನೆ ಚೆನ್ನೈನ ತಾಂಬರಂ ಬಳಿ ನಡೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸರು, ತಾಂಬರಂ ನಗರದ ಗುಡುವಂಚೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ 03.30 ಗಂಟೆಗೆ ಅರುಂಗಲ್ ರಸ್ತೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಮುರುಗೇಶನ್ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಶಿವಗೃನಾಥನ್ ಮತ್ತು ಕಾನ್‌ಸ್ಟೆಬಲ್‌ಗಳು ವಾಹನಗಳ ತಪಾಸಣೆ ಕಾರ್ಯಾಚರಣೆ ನಡೆಸುತ್ತಿದ್ದರು.
ಈ ವೇಳೆ ಕಪ್ಪು ಬಣ್ಣದ ಸ್ಕೋಡಾ ಕಾರೊಂದನ್ನು ತಪಾಸಣೆಗೆ ಎಂದು ಸಬ್ ಇನ್ಸ್‌ಪೆಕ್ಟರ್ ನಿಲ್ಲಿಸಲು ಯತ್ನಿಸಿದ್ದಾರೆ. ವಾಹನವನ್ನು ನಿಲ್ಲಿಸದೇ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ಗಳು ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕಾರಿಂದ ಕೆಳಗಿಳಿದ ನಾಲ್ವರು, ಏಕಾಎಕಿ ಪೊಲೀಸರ ಮೇಲೆ ಲಾಂಗು, ಮಚ್ಚುಗಳಿಂದ ದಾಳಿ ನಡೆಸಿದ್ದಾರೆ.
ಈ ವೇಳೆ ಸಹಾಯಕ ನಿರೀಕ್ಷಕರ ಎಡಗೈಗೆ ಮಚ್ಚಿನಿಂದ ಹಲ್ಲೆ ನಡೆಸೆ ಗಾಯಗೊಳಿಸಿದ್ದಾರೆ. ಇದನ್ನು ಕಂಡು ಪೊಲೀಸ್ ಇನ್ಸ್‌ಪೆಕ್ಟರ್ ಸ್ವಯಂ ರಕ್ಷಣೆಗಾಗಿ ರೌಡಿಶೀಟರ್ಗಳ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ರೌಡಿಶೀಟರ್ಗಳು ಸಾವನ್ನಪ್ಪಿದರೇ, ಮತ್ತಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ.
10 ಕೊಲೆ ಪ್ರಕರಣ: ವಿನೋದ್ ಅಲಿಯಾಸ್ ಚೋಟಾ ವಿನೋದ್ (35), ರಮೇಶ್ (32) ಮೃತ ರೌಡಿಶೀಟರ್ಗಳು. ವಿನೋದ್ ಅಲಿಯಾಸ್ ಚೋಟಾ ವಿನೋದ್ ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ಕೊಲೆ, 15 ಕೊಲೆ ಯತ್ನ ಪ್ರಕರಣಗಳು ಸೇರಿದಂತೆ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
20ಕ್ಕೂ ಹೆಚ್ಚು ಪ್ರಕರಣ ದಾಖಲು: ಇನ್ನುಳಿದಂತೆ ರಮೇಶ್ ಮೇಲೂ ವಿವಿಧ ಠಾಣೆಗಳಲ್ಲಿ 10 ಸರಗಳ್ಳತನ, 15 ಹಲ್ಲೆ ಮತ್ತು ಸುಲಿಗೆ ಪ್ರಕರಣ, 5 ಕೊಲೆ, 7 ಕೊಲೆ ಯತ್ನ ಪ್ರಕರಣಗಳು ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡ ಶಿವಗೃನಾಥನ್ ಅವರನ್ನು ಚಿಕಿತ್ಸೆಗಾಗಿ ಕ್ರೋಮ್ ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ರೌಡಿಶೀಟರ್ಗಳನ್ನು ಚಿಕಿತ್ಸೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೇ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ದಾಳಿ ನಡೆಸಿ ಪರಾರಿಯಾಗಿರುವ ಇನ್ನಿಬ್ಬರ ರೌಡಿಶೀಟರ್ಗಳ ಶೋಧಕಾರ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:Suspected human sacrifice: ಕಾರ್ಯಸಿದ್ಧಿಗಾಗಿ ಬಾಲಕನ ನರಬಲಿ ಶಂಕೆ.. ಅರ್ಚಕಿ ಸೇರಿ ನಾಲ್ವರ ಬಂಧನ