ಚಮೋಲಿ(ಉತ್ತರಾಖಂಡ): ನಿರ್ಮಾಣ ಹಂತದಲ್ಲಿರುವ ತಪೋವನ ವಿಷ್ಣುಘಡ ಜಲವಿದ್ಯುತ್ ಯೋಜನೆಯ ಸುರಂಗದಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಎರಡು ಮೃತದೇಹ ಹೊರತೆಗೆಯಲಾಗಿದೆ.
ಹಿಮನದಿ ದುರಂತ ಸಂಭವಿಸಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಆದರೆ ಜೂನ್ 9ರಂದು ತಪೋವನ-ವಿಷ್ಣುಗಡ್ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಸುರಂಗವನ್ನು ಸ್ವಚ್ಛಗೊಳಿಸುವ ವೇಳೆ ದುರಂತದಲ್ಲಿ ಮೃತಪಟ್ಟ ಇಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಒಂದು ತಲೆಯಿಲ್ಲದ ಮೃತದೇಹ ಮತ್ತು ಇನ್ನೊಂದು ಶವ ಸುರಂಗದ ಒಳಗಿನಿಂದ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
2021 ಫೆಬ್ರವರಿ 7ರಂದು ಋಷಿ ಗಂಗಾದಲ್ಲಿ ಹಿಮನದಿ ಸ್ಫೋಟಗೊಂಡು ತಪೋವನ ಸುರಂಗ ಪ್ರವೇಶಿಸಿತು. ನೀರಿನಲ್ಲಿ ಸುಮಾರು 205 ಜನರು ಜೀವಂತವಾಗಿ ಸಮಾಧಿಯಾದರು. ಈಗಲೂ ಅವಶೇಷಗಳಡಿಯಲ್ಲಿ ಸಿಲುಕಿರುವ ಮೃತದೇಹ ಪತ್ತೆ ಕಾರ್ಯ ನಡೆಯುತ್ತಿದ್ದು, ಇದೀಗ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಇದನ್ನೂ ಓದಿ:ವಿರೋಧದ ಮಧ್ಯೆ ನಡೀತು ಕ್ಷಮಾ ಬಿಂದು 'ಸೆಲ್ಫ್ ಮ್ಯಾರೇಜ್'.. ನಿಗದಿತ ದಿನಾಂಕಕ್ಕಿಂತ ಮುಂಚೆಯೇ ವಿವಾಹ!
ಹಿಮನದಿ ದುರಂತ ಅಂದು ರಿಷಿ ಗಂಗಾ ಜಲವಿದ್ಯುತ್ ಯೋಜನೆಯನ್ನು ಸಂಪೂರ್ಣವಾಗಿ ನಾಶಪಡಿಸಿತು. ಮೃತದೇಹಗಳು ಇನ್ನೂ ಅವಶೇಷಗಳಡಿ ಸಿಲುಕಿವೆ. ಸದ್ಯ ಪತ್ತೆಯಾದ ರುಂಡ ಇಲ್ಲದ ಶವವನ್ನು ಜೋಶಿಮಠ ಸಮೀಪದ ಢಾಕ್ ಗ್ರಾಮದ ಹರೀಶ್ ಸಿಂಗ್ ಎಂದು ಗುರುತಿಸಲಾಗಿದೆ. ಎರಡನೇ ಶವದ ಗುರುತು ಇನ್ನೂ ಪತ್ತೆಯಾಗಿಲ್ಲ. ಅಂದು ಜೀವಂತ ಸಮಾಧಿಯಾದ 205 ಮಂದಿಯಲ್ಲಿ 82 ಮೃತದೇಹಗಳು ಮತ್ತು ಓರ್ವರ ದೇಹದ ಒಂದು ಅಂಗವನ್ನು ಮಾತ್ರ ಈವರೆಗೆ ಹೊರತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.