ಕುಪ್ವಾರ (ಜಮ್ಮುಮತ್ತು ಕಾಶ್ಮೀರ) : ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿಂದು ಘಟನೆ ನಡೆದಿದೆ. ಇಲ್ಲಿನ ಎಲ್‌ಒಸಿ ಬಳಿಯ ದುಬ್ನಾರ್ ಮಜಲ್ ಪ್ರದೇಶದಲ್ಲಿ ಶೋಧ ನಡೆಯಿತು.
ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಕುಪ್ವಾರದ ದುಬ್ನಾರ್ ಮಜಲ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಪೊಲೀಸರು ಮತ್ತು ಭಾರತೀಯ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ತಕ್ಷಣ ಪ್ರದೇಶವನ್ನು ಸುತ್ತುವರೆದು ಉಗ್ರರನ್ನು ಸದೆಬಡಿಯುವ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಸೇನಾ ಮತ್ತು ಉಗ್ರರ ನಡುವಿನ ಘರ್ಷಣೆಯಲ್ಲಿ ಗ್ರಾಮದ ಜನರು ಭಯಭೀತಗೊಂಡಿದ್ದರು.
ಕಳೆದ ಮೇ 3ರಂದು ಕುಪ್ವಾರ ಜಿಲ್ಲೆಯ ಮಜಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಉಗ್ರರು ಸಾವನ್ನಪ್ಪಿದ್ದರು. ಮೇ 7ರಂದು ಕುಪ್ವಾರದ ಕರಲಾಪುರ ಎಂಬಲ್ಲಿ ಓರ್ವ ಉಗ್ರಗಾಮಿಯನ್ನು ಗ್ರೆನೇಡ್‌ನೊಂದಿಗೆ ಬಂಧಿಸಲಾಗಿತ್ತು.
ಇದನ್ನೂ ಓದಿ :Heart attack : ಹೃದಯಾಘಾತದಿಂದ ಇಬ್ಬರು ಯೋಧರು ಸಾವು