ರಂಗಾರೆಡ್ಡಿ(ತೆಲಂಗಾಣ):ಕಳೆದ ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ನಡೆದ ಅಪ್ರಾಪ್ತೆ ಅತ್ಯಾಚಾರ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಕೆಲಸ ಕೊಡಿಸುವುದಾಗಿ ನಂಬಿಸಿ, ಮಹಿಳೆಯೊಬ್ಬರ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆ.
ಶಂಶಾಬಾದ್ ವಲಯದ ರಂಗಾರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿ, ತದನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಗ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಈ ಘಟನೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮದನಪಲ್ಲಿಯ ಕೋಠಾ ತಾಂಡಾದಲ್ಲಿ ವಾಸವಾಗಿದ್ದ ಮಹಿಳೆ ದಿನಗೂಲಿ ಕೆಲಸ ಮಾಡ್ತಿದ್ದರು. ಸಂತ್ರಸ್ತೆ ಬಳಿ ಬಂದಿರುವ ಇಬ್ಬರು, ಕೆಲಸ ಕೊಡಿಸುವುದಾಗಿ ನಂಬಿಸಿದ್ದು, ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರುವ ಕಾಮುಕರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ, ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಕೋವಿಡ್.. 7 ಸಾವಿರದ ಗಡಿ ದಾಟಿದ ಹೊಸ ಪ್ರಕರಣಗಳು!
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತೆ ನೋಡಿರುವ ಸ್ಥಳೀಯರು ತಕ್ಷಣವೇ 100ಗೆ ಫೋನ್ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಪತಿ ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಕಿರಿಯ ಮಗಳ ಮದುವೆ ಮಾಡಿಸಿದ್ದಳು. ಮಗ ಸದ್ಯ ಪಿಯುಸಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ.