ಹೈದರಾಬಾದ್ (ತೆಲಂಗಾಣ): ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಪಂಜಾಗುಟ್ಟ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುಲಾಬ್ ಮಾಲಿ ಹಾಗೂ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಅಂದಾಜು 1 ಕೋಟಿ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳಿಬ್ಬರು ಕಳೆದ 10 ವರ್ಷಗಳಿಂದ ಮುಂಬೈನ ರಾನುಜಾ ಜ್ಯುವೆಲ್ಲರ್ಸ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ಗುಲಾಬ್ ತನ್ನ ಮಾಲೀಕನಿಂದ ಆಭರಣಗಳನ್ನು ಪಡೆದು ಹೈದರಾಬಾದಿನ ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ. ಆದರೆ, ಆ ವಹಿವಾಟಿನಲ್ಲಿ ನಿರೀಕ್ಷೆಗೆ ತಕ್ಕಷ್ಟು ಲಾಭ ಸಿಗಲಿಲ್ಲವಾದ್ದರಿಂದ ಪ್ರವೀಣ್ ಜತೆ ಸೇರಿ ಕಳ್ಳತನಕ್ಕಿಳಿದಿದ್ದ ಎಂದು ಹೇಳಿದ್ದಾರೆ.