ಹೈದರಾಬಾದ್: ತೆಲಂಗಾಣ ಮತ್ತು ಛತ್ತೀಸ್‌ಗಢ ಗಡಿಯಲ್ಲಿರುವ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯ ಚೇರ್ಲ ಮಂಡಲದ ಪುಟ್ಟಪಾಡು ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ನಕ್ಸಲರು ಹತರಾಗಿದ್ದಾರೆ.
ಮೃತರಲ್ಲಿ ಓರ್ವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಐಒಎಸ್ ಕಮಾಂಡರ್ ರಾಜೇಶ್ ಎಂದು ಗುರುತಿಸಲಾಗಿದೆ. ತೆಲಂಗಾಣದ ಮಾವೋವಾದಿ ವಿರೋಧಿ ಪಡೆಯ ಗ್ರೇಹೂಂಡ್ಸ್ ಸಿಬ್ಬಂದಿ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಾವೋವಾದಿಗಳಿಗೆ ಗ್ರೇಹೂಂಡ್ಸ್ ಸಿಬ್ಬಂದಿ ಶರಣಾಗುವಂತೆ ಸೂಚಿಸಿದ್ದರು. ಆದ್ರೆ, ನಕ್ಸಲರು ಪ್ರತಿದಾಳಿ ನಡೆಸಿದ್ದು ಗುಂಡಿನ ದಾಳಿಯಲ್ಲಿ ಇಬ್ಬರನ್ನು ಹತ್ಯೆಗೈಯ್ಯಲಾಗಿದೆ. ಇತರರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದು, ಗ್ರೇಹೂಂಡ್ಸ್ ಸಿಬ್ಬಂದಿಗೆ ಯಾವುದೇ ತೊಂದರೆ ಆಗಿಲ್ಲ.
ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಮಾವೋವಾದಿಗಳನ್ನು ಮಟ್ಟಹಾಕುವಂತೆ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಅಂಜನಿ ಕುಮಾರ್ ಅವರು ಪೊಲೀಸ್ ಪಡೆಗೆ ಎಚ್ಚರಿಕೆ ನೀಡಿದ ಎರಡು ದಿನಗಳ ಬಳಿಕ ಗುಂಡಿನ ದಾಳಿ ನಡೆದಿದೆ. ಏಪ್ರಿಲ್ 26 ರಂದು ಛತ್ತೀಸ್‌ಗಢದ ದಕ್ಷಿಣ ಬಸ್ತಾರ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ 10 ಭದ್ರತಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಣ್ಣ ಘಟನೆಯೂ ತೆಲಂಗಾಣದ ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಅಧಿಕಾರಿಗಳು ಹೆಚ್ಚು ಜಾಗೃತರಾಗಿ ಪರಿಸ್ಥಿತಿಯನ್ನು ದೃಢವಾಗಿ ನಿಭಾಯಿಸಬೇಕು" ಎಂದು ಸಲಹೆ ನೀಡಿದ್ದರು.
ಇದನ್ನೂ ಓದಿ :ಒಡಿಶಾದಲ್ಲಿ ನಕ್ಸಲ್ ಗುಂಪಿನ ಮೇಲೆ ದಾಳಿ .. ಓರ್ವ ಮಹಿಳಾ ಮಾವೋವಾದಿ ಗುಂಡೇಟಿಗೆ ಬಲಿ