ಬಾರಾಮುಲ್ಲಾ(ಕಾಶ್ಮಿರ): ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕುಂಜೆರ್ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಬಾರಾಮುಲ್ಲಾ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ 176 ಬೆಟಾಲಿಯನ್ ಜಂಟಿ ತಂಡವು ಅನುಮಾನಗೊಂಡು ಉಗ್ರರು ಇರುವ ಮಾಹಿತಿ ಪಡೆದ ಬಳಿಕ ಶೋಧ ಕಾರ್ಯಾಚರಣೆ ಶುರು ಮಾಡಿತು. ಶೋಧ ಕಾರ್ಯಾಚರಣೆ ವೇಳೆ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್) ಸಂಘಟನೆಗೆ ಸೇರಿದ ಉಗ್ರರನ್ನು ಪತ್ತೆ ಹಚ್ಚಿ ಬಂಧಿಸಿದೆ. ಉಗ್ರರನ್ನು ಝಂಡ್‌ಪಾಲ್ ಕಿಂಜಾರ್ ನಿವಾಸಿ ಮುಷ್ತಾಕ್ ಅಹ್ಮದ್ ಖಾನ್ ಅವರ ಪುತ್ರ ಖುರ್ಷಿದ್ ಅಹ್ಮದ್ ಖಾನ್ ಮತ್ತು ಗುಲಾಮ್ ಮೊಹಿಯುದ್ದೀನ್ ಖಾನ್ ಅವರ ಪುತ್ರ ರಿಯಾಜ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ.
ಬಾರಾಮುಲ್ಲಾ ಪೊಲೀಸ್ರು ಶಂಕಿತ ಇಬ್ಬರು ಉಗ್ರರನ್ನು ವಿಚಾರಣೆಗೆ ಒಳಪಡಿಸಿದಾಗ ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್)ದೊಂದಿಗೆ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಅಪಾರ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದು, ಅವುಗಳಲ್ಲಿ ಎಕೆ-47 ರೈಫಲ್‌ನ 2 ಮ್ಯಾಗಜೀನ್‌ಗಳು, ಎಕೆ-47 ರೈಫಲ್‌ನ 15 ಬುಲೆಟ್‌ಗಳು ಮತ್ತು ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್) 20 ಖಾಲಿ ಪೋಸ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂಜೆರ್ ಸೇರಿದಂತೆ ಸಮೀಪದ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಈ ಅಕ್ರಮ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಶಸ್ತ್ರಾಸ್ತ್ರ ಮತ್ತು ಯುಎ (ಪಿ) ಕಾಯ್ದೆಯಡಿ ಇಬ್ಬರು ಉಗ್ರರ ವಿರುದ್ಧ ಕಂಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಚುರುಕುಗೊಳಿಸದ್ದಾರೆ.
ಕಾಶ್ಮೀರ ಪಂಡಿತನಿಗೆ ಗುಂಡು ಹಾರಿಸಿ ಉಗ್ರರ ಹತ್ಯೆ: ಪುಲ್ವಾಮಾ ಜಿಲ್ಲೆಯಲ್ಲಿ ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿ ಉಗ್ರರು ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಮೃತರನ್ನು ಸಂಜಯ್ ಶರ್ಮಾ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರದ ಅಚನ್ ನಿವಾಸಿಯಾದ ಸಂಜಯ್ ಶರ್ಮಾ ಅವರು ಬ್ಯಾಂಕ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಕೆಲವು ಅಪರಿಚಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪುಲ್ವಾಮಾ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ನಂತರ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಚನ್ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಗ್ರರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಹಿಂದಿನ ಹತ್ಯೆಗಳು..: 2022ರ ಅಕ್ಟೋಬರ್‌ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಹಣ್ಣಿನ ತೋಟಕ್ಕೆ ಹೋಗುತ್ತಿದ್ದ ಕಾಶ್ಮೀರಿ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಕೃಷಿಕರಾಗಿದ್ದ ಪುರಾನ್ ಕ್ರಿಶನ್ ಭಟ್ ಹತ್ಯೆಯಾಗಿದ್ದರು. ಬಳಿಕ ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಕಾಶ್ಮೀರ ಕಣಿವೆ ಸೇರಿದಂತೆ ಜಮ್ಮುವಿನ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ಮಾಡಿ, ಆಕ್ರೋಶ ಹೊರ ಹಾಕುವ ಮೂಲಕ ಕಾಶ್ಮೀರದಿಂದ ಪಂಡಿತರನ್ನು ಜಮ್ಮುವಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.
ಇದನ್ನೂಓದಿ:ಅಲಿಗಢ ಮಸೀದಿಗೆ ಟಾರ್ಪಾಲಿನ್ ಹೊದಿಕೆ: ಹೋಳಿಯಲ್ಲಿ ಬಣ್ಣ ಸಿಡಿಯದಂತೆ ಮುನ್ನೆಚ್ಚರಿಕೆ