ಘಾಜಿಯಾಬಾದ್ (ಉತ್ತರ ಪ್ರದೇಶ): ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಗುತ್ತಿಗೆದಾರ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ದೆಹಲಿ ಸಮೀಪದ ಘಾಜಿಯಾಬಾದ್ನ ಲೋನಿ ಪಟ್ಟಣದ ರೂಪ್ ನಗರ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದ 10 ಮಂದಿಯನ್ನು ಹೊರತೆಗೆಯಲಾಗಿದೆ. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಮಂದಿ ಕಾರ್ಮಿಕರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಷಗಳಡಿ ಯಾರೂ ಸಿಲುಕಿಲ್ಲ ಎಂಬುದಾಗಿ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಗಾಯಗೊಂಡಿರುವ ಕಾರ್ಮಿಕರನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟ ಗುತ್ತಿಗೆದಾರನ ಮಕ್ಕಳ ಮದುವೆ ಇತ್ತೀಚೆಗೆ ನಡೆದಿತ್ತು. ಇದೀಗ ಒಂದು ತಿಂಗಳ ಬಳಿಕ ಈ ದುರಂತ ಸಂಭವಿಸಿದೆ.
ನನ್ನ ಅಂಕಲ್ ಗುತ್ತಿಗೆದಾರರಾಗಿದ್ದರು. ಅವರು ಕಟ್ಟಡದ ಗೋಡೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಸ್ಕ್ಯಾಫೋಲ್ಡಿಂಗ್ ಕುಸಿದಿದ್ದು, ಅದರಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಅವರ ಇಬ್ಬರು ಮಕ್ಕಳಿಗೆ ಜನವರಿ ತಿಂಗಳಲ್ಲಿ ವಿವಾಹವಾಗಿತ್ತು. ಈಗ ಅವರು ಲೋನಿಯ ಪ್ರೇಮ್ನಗರದಲ್ಲಿ ವಾಸಿಸುತ್ತಿದ್ದಾರೆ ಎಂದು ಮೃತ ಗುತ್ತಿಗೆದಾರರ ಸೋದರಳಿಯ ತಿಳಿಸಿದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯರನ್ನು ಅಗಲಿದ್ದಾರೆ.