ಪೆದ್ದಪಲ್ಲಿ (ತೆಲಂಗಾಣ):ರಸ್ತೆ ಅಪಘಾತದಲ್ಲಿ ಇಬ್ಬರು ಚಿನ್ನದ ವ್ಯಾಪಾರಿಗಳು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂ ಎನ್ಟಿಪಿಸಿ ಬಳಿಯಿರುವ ಮಲ್ಯಾಲಪಲ್ಲಿ ರೈಲ್ವೆ ಸೇತುವೆ ಬಳಿ ನಡೆದಿದೆ.
ವೇಗದ ಚಾಲನೆಯಿಂದ ಕಾರು ಉರುಳಿ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಕರೀಂನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅವರಿಬ್ಬರ ಸ್ಥಿತಿಯೂ ಗಂಭೀರವಾಗಿದೆ .
ಕಾರಿನಲ್ಲಿದ್ದ ಸುಮಾರು ಒಂದೂವರೆ ಕೆಜಿ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಾರಿನಲ್ಲಿ ಚಿನ್ನದ ಜೊತೆ 10 ಬ್ಯಾಗ್ಗಳಲ್ಲಿ ಪುಸ್ತಕಗಳು ಪತ್ತೆಯಾಗಿವೆ.
ಮೃತರನ್ನು ಚಿನ್ನದ ವ್ಯಾಪಾರಿಗಳೆಂದು ಪೊಲೀಸರು ಗುರುತಿಸಿದ್ದು, ಗುಂಟೂರು ಜಿಲ್ಲೆಯ ನರಸರಾವ್ಪೇಟ್ ಮೂಲದವರೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.