ರಾಂಚಿ(ಜಾರ್ಖಂಡ್): ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇಬ್ಬರು ಐಸಿಸ್ ಉಗ್ರರನ್ನು ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ಇಲ್ಲಿನ ಗೊಡ್ಡಾ ಮತ್ತು ಹಜಾರಿ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಬಂಧಿತರನ್ನು ಗೊಡ್ಡಾ ಜಿಲ್ಲೆಯ ಅಸನ್ಬಾನಿ ನಿವಾಸಿ ಮೊಹಮ್ಮದ್ ಆರಿಝ್ ಹುಸ್ಸೇನೈನ್ ಮತ್ತು ಹಜಾರಿಭಾಗ್ ಜಿಲ್ಲೆಯ ಪೆಲವಾಲ್ ನಿವಾಸಿ ನಸೀಮ್ ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಆರಿಝ್ ಹುಸ್ಸೇನೈನ್ ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಸಂಪರ್ಕಿಸುತ್ತಿದ್ದನು. ಬಳಿಕ ಐಸಿಸ್ ವಿಚಾರಧಾರೆಗಳನ್ನು ಅವರ ತಲೆಗೆ ಬಿತ್ತುತ್ತಿದ್ದನು. ಜೊತೆಗೆ, ಬ್ರೈನ್ ವಾಶ್ ಮಾಡುತ್ತಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೋರ್ವ ನಸೀಮ್ ಎಂಬಾತ, ಹುಸೇನೈನ್ ಜೊತೆ ಅನುಮಾನಾಸ್ಪದ ಸಂದೇಶಗಳನ್ನು ಹಂಚಿಕೊಂಡಿದ್ದಕ್ಕೆ ಬಂಧಿಸಲಾಗಿದೆ. ವಿಚಾರಣೆಯಲ್ಲಿ ಹುಸೇನೈನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ವಿವಿಧ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಸೀಮ್ ಹುಸೇನೈನ್ಗೆ ಜಿಹಾದ್ ಮತ್ತು ಐಸಿಸ್ ವಿಚಾರಧಾರೆಗಳನ್ನು ಹೊಂದಿರುವ ಎರಡು ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಎಟಿಎಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.