ಪೋರ್‌ಬಂದರ್(ಗುಜರಾತ್):ಪೋರಬಂದರ್ ಬಳಿಯ ಹಳ್ಳಿಯೊಂದರಲ್ಲಿ ಶನಿವಾರ ಸಂಜೆ ಯಾವುದೋ ವಿಷಯಕ್ಕೆ ಸಂಬಂಧಿಸಿ ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಸಿಬ್ಬಂದಿ ಮಧ್ಯೆ ಜಗಳವಾಗಿ ಒಬ್ಬ ಸಹೋದ್ಯೋಗಿ ಗುಂಡಿನ ದಾಳಿ ನಡೆಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ಗುಜರಾತ್ ಪೊಲೀಸರು ಮಾಹಿತಿ ನೀಡಿದರು.
ಡಿ.1 ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ಇಲ್ಲಿಗೆ ಕಳುಹಿಸಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನರು ಇವರು ಎಂದು ಪೋರ್‌ಬಂದರ್ ಡಿಸಿ ಹೇಳಿದ್ದರು. ಆದರೆ ಈ ಯೋಧರು ಮಣಿಪುರ ಎಸ್‌ಎಪಿ ಕಂಪನಿ, ಐಆರ್‌ಬಿಗೆ ಸೇರಿದವರೆಂದು ನಿನ್ನೆ ರಾತ್ರಿ ರಾಜ್ಯ ಪೊಲೀಸರು ಖಚಿತಪಡಿಸಿದ್ದಾರೆ.
ಪೋರ್‌ಬಂದರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ತುಕ್ಡಾ ಗೋಸಾ ಗ್ರಾಮದ ಸೈಕ್ಲೋನ್ ಸೆಂಟರ್‌ನಲ್ಲಿ ಯೋಧರು ತಂಗಿದ್ದರು. ಶನಿವಾರ ಸಂಜೆ ಕ್ಷಲ್ಲಕ ವಿಚಾರಕ್ಕೆ ಜವಾನನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ. ಇಬ್ಬರು ಜವಾನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬನ ಹೊಟ್ಟೆಗೆ ಹಾಗೂ ಇನ್ನೊಬ್ಬನ ಕಾಲಿಗೆ ಗುಂಡು ತಗುಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಆರೋಪಿಯು ಮಣಿಪುರ ಎಸ್‌ಎಪಿ 3ನೇ ಭಾರತೀಯ ರಿಸರ್ವ್ ಬೆಟಾಲಿಯನ್ನ ರೈಫಲ್‌ಮ್ಯಾನ್ ಕಾನ್‌ಸ್ಟೆಬಲ್ ಆಗಿದ್ದು, ತನ್ನ ಎಕೆ-47 ರೈಫಲ್‌ನಿಂದ ಇತರ ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ, ಗಾಯಗೊಂಡ ಕಾನ್‌ಸ್ಟೆಬಲ್‌ಗಳಲ್ಲಿ ಒಬ್ಬರು 3ನೇ ಐಆರ್‌ಬಿ ತುಕಡಿಗೆ ಸೇರಿದವರು ಮತ್ತು ಇನ್ನೊಬ್ಬರು 4ನೇ ತುಕಡಿಗೆ ಸೇರಿದವರಾಗಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಆರ್‌ಎಫ್‌ಒ ಹತ್ಯೆ ಮಾಡಿದ ಗುತ್ತಿ ಕೋಯಾ ಬುಡಕಟ್ಟು ಜನಾಂಗ ಹೊರಹಾಕಲು ನಿರ್ಣಯ