ಬಾರಾಮುಲ್ಲ (ಜಮ್ಮು ಮತ್ತು ಕಾಶ್ಮೀರ):ನಾಕಾ ತಪಾಸಣೆಯ ವೇಳೆ ಆಜಾದ್ಗಂಜ್ ಬಾರಾಮುಲ್ಲಾದಲ್ಲಿ ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಯುಎ (ಪಿ) ಆಕ್ಟ್ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿತ ಉಗ್ರರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೈಬ್ರಿಡ್ ಭಯೋತ್ಪಾದಕರು ಲಷ್ಕರ್ ಎ ತೊಯ್ಬಾದೊಂದಿಗೆ ಸಂಬಂಧ ಸಂಪರ್ಕದಲ್ಲಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಗ್ರರ ಬಳಿ ಒಂದು ಪಿಸ್ತೂಲ್ ಮ್ಯಾಗಜೀನ್, ನಾಲ್ಕು ಗುಂಡುಗಳು ಮತ್ತು ಒಂದು ಗ್ರೆನೇಡ್ ಪತ್ತೆಯಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಬಾರಾಮುಲ್ಲಾ ಪಟ್ಟಣದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಭಯೋತ್ಪಾಧಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಬಾರಾಮುಲ್ಲಾ ಪೊಲೀಸ್, 53 ಬಿಎನ್ ಸಿಆರ್‌ಪಿಎಫ್ ಮತ್ತು ಆರ್ಮಿ 46 ಆರ್‌ಆರ್‌ನ ಜಂಟಿ ಪಡೆಗಳು ಅಜಾದ್‌ಗುಂಜ್ ಓಲ್ಡ್ ಟೌನ್‌ನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದವು.
ಶಂಕಿತ ಉಗ್ರರು ಜಂಟಿ ಕಾರ್ಯಾಚರಣೆ ಗಮನಿಸಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಚಾಣಾಕ್ಷತನದಿಂದ ಜಂಟಿ ಪಡೆಗಳು ಸೆರೆ ಹಿಡಿದಿದ್ದಾರೆ. ಬಂಧಿತರು ಬಾಗ್ ಬಾರಮುಲ್ಲಾ ನಿವಾಸಿ ಫೈಸಲ್ ಮಜೀದ್ ಗನಿ ಮತ್ತು ಬಾಗ್ - ಇ - ಇಸ್ಲಾಂ ಓಲ್ಡ್ ಟೌನ್ ಬಾರಾಮುಲ್ಲಾ ನಿವಾಸಿ ನೂರುಲ್ ಕಮ್ರಾನ್ ಗನಿ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಲ್ಲೂ ಐವರು ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಜು. 19ರಂದು ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬ ಉಗ್ರರನ್ನು ಬಂಧಿಸಲಾಗಿತ್ತು. ಆರೋಪಿಗಳಿಂದ 7 ಕಂಟ್ರಿ ಮೇಡ್ ಪಿಸ್ತೂಲ್, 4 ವಾಕಿಟಾಕಿ, ಮದ್ದುಗುಂಡು, 42 ಸಜೀವ ಗುಂಡುಗಳು, 2 ಸೆಟಲೈಟ್ ಫೋನ್, 2 ಡ್ರ್ಯಾಗರ್ ಹಾಗೂ 4 ಗ್ರೆನೇಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮಡಿವಾಳ ಟೆಕ್ನಿಕಲ್ ಸೆಲ್ನಲ್ಲಿ ಶಂಕಿತರ ತೀವ್ರ ವಿಚಾರಣೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಮೊಬೈಲ್ ಫೋನ್ಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಇನ್ನಿಬ್ಬರು ಇವರ ಜೊತೆ ನಂಟು ಹೊಂದಿರುವ ಮಾಹಿತಿ ಸಿಕ್ಕಿತ್ತು. ತನಿಖಾ ತಂಡಗಳು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಅವರು ರೂಪಿಸಿದ ಪ್ರಮುಖ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿದ್ದರು. ಆರೋಪಿಗಳು ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಪಿಸ್ತೂಲ್ ಸೇರಿದಂತೆ ಸ್ಫೋಟಕ್ಕೆ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿದ್ದರು.
ಇದನ್ನೂ ಓದಿ:ಮುಂಬೈನಲ್ಲಿ ಮತ್ತೆ ಉಗ್ರರ ದಾಳಿ ಭೀತಿ: ಕೊಲಾಬಾ ಹೌಸ್ ಭದ್ರತೆ ಹೆಚ್ಚಳ