ಮುಂಬೈ(ಮಹಾರಾಷ್ಟ್ರ): ಕೋವಿಡ್ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಗಳಿಗೆ ಆನ್‌ಲೈನ್ ಪರೀಕ್ಷೆಗಳಿಗೆ ಒತ್ತಾಯಿಸಿ ಪ್ರತಿಭಟನೆಗೆ ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವಿಯಾಗಿರುವ ವಿಕಾಸ್ ಪಾಠಕ್ ಸೇರಿದಂತೆ ಇಬ್ಬರನ್ನು ಮುಂಬೈನ ಧಾರವಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ವಿಕಾಸ್ ಫಾಟಕ್ ಹಿಂದೂಸ್ತಾನಿ ಭಾವು ಎಂದೇ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತನಾಗಿರುವ ವಿಕಾಸ್ ಪಾಠಕ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಆನ್‌ಲೈನ್ ಪರೀಕ್ಷೆಗೆ ಒತ್ತಾಯಿಸಿ, ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದ ಶಿಕ್ಷಣ ಸಚಿವ ವರ್ಷಾ ಗಾಯಕ್‌ವಾಡ್ ಅವರ ನಿವಾಸದ ಬಳಿಯಿರುವ ಧಾರಾವಿ ಪ್ರದೇಶದಲ್ಲಿ ಪ್ರತಿಭಟಿಸಲು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಲು ಅವರು ಪ್ರಚೋದನೆ ನೀಡಿದ್ದರು ಎಂಬ ಆರೋಪದ ಮೇಲೆ ಧಾರಾವಿ ಪೊಲೀಸರು ವಿಕಾಸ್ ಪಾಠಕ್ರನ್ನು ಬಂಧಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದ ಅನೇಕ ಸಾವು-ನೋವುಗಳು ಸಂಭವಿಸಿವೆ. ಜನರು ಅದರ ಭಯದಿಂದ ಹೊರಬಂದಿಲ್ಲ. ಈಗ ಒಮಿಕ್ರಾನ್ ರೂಪಾಂತರ ಕಾಲಿಟ್ಟಿದೆ. ಸರ್ಕಾರವೇ ಜನರಿಗೆ ಮನೆಯಲ್ಲಿಯೇ ಇದ್ದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಿದೆ. ಎಲ್ಲರೂ ಆನ್‌ಲೈನ್ ಮೊರೆ ಹೋಗಿದ್ದಾರೆ. ಆದರೆ, ಮಕ್ಕಳನ್ನು ಆಫ್‌ಲೈನ್ ಪರೀಕ್ಷೆ ಬರೆಯಲು ಒತ್ತಾಯಿಸಲಾಗುತ್ತಿದೆ ಎಂದು ವಿಕಾಸ್ ಪಾಠಕ್ ಹೇಳಿದ್ದರು.
ಇದರ ಜೊತೆಗೆ ಆಫ್‌ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಾನು ಸರ್ಕಾರಕ್ಕೆ ವಿನಂತಿಸಲು ಬಯಸುತ್ತೇನೆ. ಇಲ್ಲದಿದ್ದರೆ, ನಾನು ಮತ್ತು ನನ್ನ ವಿದ್ಯಾರ್ಥಿಗಳು ವರ್ಷಾ ಗಾಯಕ್‌ವಾಡ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಅವರಿಗೆ ನ್ಯಾಯ ಸಿಗುವವರೆಗೂ ನಾನು ನಿಲ್ಲುವುದಿಲ್ಲ ಎಂದು ಭಾವು ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧಾರಾವಿ ಪೊಲೀಸರು ವಿಕಾಸ್ ಪಾಠಕ್ನನ್ನು ಬಂಧಿಸಿದ್ದಾರೆ. ಬಂಧಿತನಾದ ಎರಡನೇ ಆರೋಪಿಯನ್ನು ಇಕ್ರಾರ್ ಖಾನ್ ವಖಾರ್ ಖಾನ್ ಎಂದು ಗುರುತಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ