ಪಶ್ಚಿಮ ಬಂಗಾಳ:ಒಡಿಶಾ ತ್ರಿವಳಿ ರೈಲು ದುರಂತ ಕಹಿ ನೆನಪು ಮಾಸುವ ಮುನ್ನವೇ ಪಶ್ಚಿಮಬಂಗಾಳದಲ್ಲಿ ಗೂಡ್ಸ್ ರೈಲುಗಳೆರಡು ಡಿಕ್ಕಿಯಾದ ಘಟನೆ ಇಂದು ಮುಂಜಾವು 4 ಗಂಟೆಗೆ ನಡೆದಿದೆ. ಬಂಕುರಾದ ಓಂಡಾ ರೈಲು ನಿಲ್ದಾಣದಲ್ಲಿ ಎರಡು ಸರಕು ಸಾಗಣೆ ರೈಲುಗಳು ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ರೈಲಿನ 12 ಬೋಗಿಗಳು ಹಳಿತಪ್ಪಿವೆ. ಇದರಿಂದ ಖರಗ್‌ಪುರ-ಬಂಕುರಾ-ಆದ್ರಾ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಓಂಡಾ ನಿಲ್ದಾಣದ ಮೂಲಕ ಮೊದಲ ಗೂಡ್ಸ್ ರೈಲು ಹಾದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಮತ್ತೊಂದು ಗೂಡ್ಸ್ ರೈಲು ರಭಸವಾಗಿ ಡಿಕ್ಕಿ ಹೊಡೆದಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಈ ಅಪಘಾತದಲ್ಲಿ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿತಪ್ಪಿವೆ. ಗೂಡ್ಸ್ ರೈಲು ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಡಿಕ್ಕಿ ವೇಳೆ ದೊಡ್ಡ ಸದ್ದು ಕೇಳಿ ಬಂದಿದ್ದು, ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ರೈಲ್ವೇ ಮೂಲಗಳ ಮಾಹಿತಿಯ ಪ್ರಕಾರ, ಎರಡೂ ಗೂಡ್ಸ್ ರೈಲುಗಳು ಖಾಲಿಯಾಗಿದ್ದವು. ಆದರೆ, ಅದ್ಹೇಗೆ ಅಪಘಾತ ಸಂಭವಿಸಿತು ಎಂಬುದು ತಿಳಿಯುತ್ತಿಲ್ಲ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ರೈಲುಗಳು ಗುದ್ದಿಕೊಂಡ ಕಾರಣ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಮಾರ್ಗ ಬಂದ್ ಆಗಿದೆ. ಸಿಬ್ಬಂದಿ ಆದಷ್ಟು ಬೇಗ ಈ ಮಾರ್ಗವನ್ನು ತೆರವು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.