ತೆಲಂಗಾಣ/ಆಂಧ್ರಪ್ರದೇಶ:ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು 15 ಜನರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವಾಪಸ್ ಆಗ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿ, ಮದನಪಲ್ಲಿಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
ಮೃತರನ್ನ ಗಂಗಿರೆಡ್ಡಿ, ಮಧುಲತಾ, ಕುಶಿತಾರೆಡ್ಡಿ, ದೇವಾಂಶರೆಡ್ಡಿ ಎಂದು ಗುರುತಿಸಲಾಗಿದೆ. ನಿಮ್ಮನಪಲ್ಲಿ ಮಂಡಲ ರೆಡ್ಡಿ ವಾರಿಪಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಇವರು ವಾಪಸ್ ಆಗುತ್ತಿದ್ದಾಗ ಘಟನೆ ನಡೆದಿದೆ. ನಿಯಂತ್ರಣ ಕಳೆದುಕೊಂಡ ಕಾರು, ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದಿದೆ.
ಪ್ರತ್ಯೇಕ ರಸ್ತೆ ಅಪಘಾತ: ತೆಲಂಗಾಣದಲ್ಲಿ 7, ಆಂಧ್ರದಲ್ಲಿ 8 ಮಂದಿ ದುರ್ಮರಣ ಮತ್ತೊಂದು ಘಟನೆಯಲ್ಲಿ ಕೃಷ್ಣಾ ಜಿಲ್ಲೆಯ ಮೊಪಿದೇವಿ ವಲಯದಲ್ಲಿ ನಡೆದಿದ್ದು, ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಉಳಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಫ್ಲೆಕ್ಸ್ ಅಡ್ಡಿಯಿಂದಾಗಿ ಈ ಅವಘಡ ಸಂಭವಿಸಿದೆ. ಮೃತರನ್ನ ವಿಜಯ (50), ಬೂರೆಪಲ್ಲಿ ರಮಣ (52), ಬೂರೆಪಲ್ಲಿ ವೆಂಕಟೇಶ್ವರಮ್ಮ (50) ಮತ್ತು ಕೋನ ವೆಂಕಟೇಶ್ (70) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಮನೆ.. ಸಜೀವ ಸಮಾಧಿಯಾದ ಮಗು!
ಇನ್ನುಳಿದಂತೆ ತೆಲಂಗಾಣದ ಎರಡು ವಿಭಿನ್ನ ಸ್ಥಳಗಳಲ್ಲಿ ರಸ್ತೆ ಅಪಘಾತ ಸಂಭವಿಸಿ ಏಳು ಜನರು ಸಾವನ್ನಪ್ಪಿದ್ದಾರೆ, ಸಿದ್ದಿಪೇಟೆ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಈ ಅವಘಡ ಸಂಭವಿಸಿವೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಜಗದೇವಪುರ ಮಂಡಲದ ಅಲಿರಾಜಪೇಟೆ ಸೇತುವೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಲಾರಿಗೆ ಆಟೋ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಖಮ್ಮಂ ಜಿಲ್ಲೆಯ ಮುಡಿಗೊಂಡ ಮಂಡಲದ ಗೋಕಿನೆಪಲ್ಲಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಆಟೋಗೆ ಬಸ್ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.