ಹೈದರಾಬಾದ್: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪಟಾಕಿ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹೈದರಾಬಾದ್‌ನ ಹಳೇ ನಗರದ ಕಂಡಿಕಲ್ ಗೇಟ್‌ನಲ್ಲಿ ಸಂಭವಿಸಿದೆ.
ಹೈದರಾಬಾದ್ನಲ್ಲಿ ಪಟಾಕಿ ಸ್ಫೋಟ: ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ - two dead and one injured for fireworks blast at Hyderabad
ದೀಪಾವಳಿ ಹಬ್ಬದಂದು ಹೈದರಾಬಾದ್‌ನ ಹಳೇ ನಗರದ ಕಂಡಿಕಲ್ ಗೇಟ್‌ನಲ್ಲಿ ದುರಂತ ಸಂಭವಿಸಿದೆ. ಪಟಾಕಿ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉಲ್ಲಾಸ್ ಎಂಬುವರು ಹೈದರಾಬಾದ್‌ನ ಹಳೇ ನಗರ ಕಂಡಿಕಲ್ ಗೇಟ್ ಪ್ರದೇಶದಲ್ಲಿ ಪಿಒಪಿ ಪ್ರತಿಮೆಗಳ ತಯಾರಿಕಾ ಘಟಕವನ್ನು ನಡೆಸುತ್ತಿದ್ದು, ನಿನ್ನೆ ಅಂಗಡಿ ಪೂಜೆ ನೆರವೇರಿಸಿ ನಂತರ ಕೆಲವೊಂದಿಷ್ಟು ಪಟಾಕಿಗಳನ್ನು ಪಶ್ಚಿಮ ಬಂಗಾಳ ಮೂಲದ ವಿಷ್ಣು (25), ಜಗನ್ (30) ಮತ್ತು ಉತ್ತರ ಪ್ರದೇಶದ ಬಿರೇನ್ (25) ಅವರಿಗೆ ನೀಡಿದ್ದಾರೆ. ಇವರು ಮಧ್ಯರಾತ್ರಿ ಸುಮಾರಿಗೆ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಪರಿಣಾಮ ವಿಷ್ಣು ಮತ್ತು ಜಗನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿರೇನ್ ಗಂಭೀರವಾಗಿ ಗಾಯಗೊಂಡಿದ್ದು, ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಪಿಒಪಿ ಪ್ರತಿಮೆಗಳನ್ನು ತಯಾರಿಸುವ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.