ಇಂದೋರ್/ ಮಧ್ಯಪ್ರದೇಶ :ಇಂದೋರ್‌ನ ಬೆಟ್ಮಾ ಪ್ರದೇಶದಲ್ಲಿ ಡೀಸೆಲ್ ಕದ್ದ ಆರೋಪದ ಮೇಲೆ ದಲಿತ ಸಮುದಾಯಕ್ಕೆ ಸೇರಿದ ಇಬ್ಬರನ್ನ ಥಳಿಸಲಾಗಿದೆ.
ಈ ಕುರಿತು ಮಾಧ್ಯಮದೊಂದಿಗೆ ಎಎಸ್‌ಪಿ ಅನಿಲ್ ಪಟೀದರ್ ಮಾತನಾಡಿ, ಕಾರ್ಮಿಕರನ್ನು ಥಳಿಸಲಾಗಿದೆ ಎಂದು ವರದಿಯಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.
ಸಂತ್ರಸ್ತ ಪಪ್ಪು ಪರ್ಮಾರ್ ಮಾತನಾಡಿ, ನಾನು ನನ್ನ ಕೆಲಸದ ಸಂಬಳ ಕೇಳಿದೆ. ಜೊತೆಗೆ ಸಂಬಳ ನೀಡುವವರೆಗೂ ಕೆಲಸ ಮಾಡುವುದಿಲ್ಲ ಎಂದು ಹೇಳಿ, ನಾನು ಮನೆಯಲ್ಲಿದ್ದೆ. ಅವರು ಬಂದು ನನ್ನನ್ನು ಒಂದು ಸ್ಥಳಕ್ಕೆ ಕರೆದೊಯ್ದು ಥಳಿಸಿದ್ದಾರೆ.
ಅಷ್ಟೇ ಅಲ್ಲ, ನಾನು ಡೀಸೆಲ್ ಕಳ್ಳತನ ಮಾಡಿರುವುದಾಗಿ ಆರೋಪಿಸಿ, ಕೆಲಸದಿಂದ ನನ್ನನ್ನು ತೆಗೆದು ಹಾಕಿದ್ದಾರೆಂದು ಅಳಲು ತೋಡಿಕೊಂಡಿದ್ದಾನೆ. ಈ ಘಟನೆ ಡಿಸೆಂಬರ್ 3ರ ರಾತ್ರಿ ನಡೆದಿದೆ. ಸಂತ್ರಸ್ತರ ಪ್ರಕಾರ, ಮುನೀಮ್ (ಅಕೌಂಟೆಂಟ್) ಪಾರಸ್, ಪಂಡಿತ್ ಶಿವನಾರೈನ್ ಮತ್ತು ಮೂರರಿಂದ ನಾಲ್ಕು ಜನರು ನಮ್ಮನ್ನು ದೌಲತಾಬಾದ್ ಗಣಿ ಪ್ರದೇಶಕ್ಕೆ ಕರೆದೊಯ್ದು, ಹಲ್ಲೆ ಮಾಡಿದ್ದಾರೆಂದು ತಿಳಿಸಿದರು. ಈ ಸಂತ್ರಸ್ತರು ಗಣಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಈ ಸುದ್ದಿಯನ್ನೂ ಓದಿ:ಅಗ್ನಿ ಅವಘಡ : 15ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ
ಮತ್ತೋರ್ವ ಸಂತ್ರಸ್ತ ಬಲರಾಮ್ ಮಾತನಾಡಿ, ನಮಗೆ ಬೆಲ್ಟ್ನಿಂದ ಹೊಡೆದಿದ್ದಾರೆ. ಅಲ್ಲದೇ ಘಟನೆಯ ವಿಡಿಯೋವನ್ನು ಸಹ ಮಾಡಲಾಗಿದೆ. ಹಲ್ಲೆ ಎಸಗಿದ ವ್ಯಕ್ತಿ ಪರಾಸ್ ಆಗಿದ್ದು, ನಮಗೆ ನ್ಯಾಯ ಬೇಕು. ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಘಟನೆ ಬೆಳಕಿಗೆ ಬಂದ ನಂತರ ಹಲವರು, ಡಿಐಜಿ ಕಚೇರಿ ಸುತ್ತುವರೆದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.