ಪಾಟ್ನಾ(ಬಿಹಾರ):ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಗೌರಿಚಕ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಹ್ಗಿ ರಾಂಪುರ ತಾಡ್ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮೃತ ಮಕ್ಕಳನ್ನು ಸಂಜಿತ್ ಕುಮಾರ್ ಎಂಬುವರ ಪುತ್ರ ರಾಜಪಾಲ್ (7) ಮತ್ತು ಸುಕುನ್ ಕುಮಾರ್ ಅಲಿಯಾಸ್ ತುನ್ನಾ ಅವರ ಪುತ್ರಿ ಶ್ರೀಸ್ಟಿ (6) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಘಟನೆಯಲ್ಲಿ ಸುಟ್ಟು ಕರಕಲಾದ ಕಾರು ಮೃತ ರಾಜಪಾಲ್ ಅವರ ತಂದೆ ಸಂಜಿತ್ ಕುಮಾರ್ ಅವರಿಗೆ ಸೇರಿದ್ದು, ಅವರು ಸೋಮವಾರ ಕಾರಿನಿಂದ ಇಳಿದು ಡೋರ್ ಲಾಕ್ ಮಾಡದೇ ಮನೆಯೊಳಗೆ ಹೋಗಿದ್ದರು. ಹೀಗಾಗಿ ಮಕ್ಕಳು ಆಟವಾಡುತ್ತ ಕಾರಿನೊಳಗೆ ತೆರಳಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮಕ್ಕಳು ಆಟವಾಡುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆಯಿಂದಾಗಿ ಮಕ್ಕಳು ಒಳಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಮಕ್ಕಳನ್ನು ರಕ್ಷಿಸಲು ಕುಟುಂಬದವರಿಗೆ ತಡವಾಗಿತ್ತು. ಬಳಿಕ ಕಾರಿನ ಗಾಜಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಇಬ್ಬರೂ ಕಂದಮ್ಮಗಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕಾರಿನಲ್ಲಿ ಇತ್ತೀಚೆಗೆ ಸಿಎನ್‌ಜಿ ಸಿಲಿಂಡರ್ ಅಳವಡಿಸಲಾಗಿತ್ತು. ಘಟನೆಯಲ್ಲಿ ಸಿಲಿಂಡರ್ ಕೂಡ ಬೆಂಕಿಗೆ ಆಹುತಿಯಾಗಿದೆ.
ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ, ಸದ್ಯ ಮೃತ ಮಕ್ಕಳ ಪೋಷಕರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಠಾಣಾಧಿಕಾರಿ ಕೃಷ್ಣ ಕುಮಾರ್ ಹೇಳಿದ್ದಾರೆ.