ಪತ್ತನಂತಿಟ್ಟ (ಕೇರಳ): ಕೇರಳದ ಪ್ರಸಿದ್ಧ ಶಬರಿಮಲೆ ಮತ್ತು ಮಾಲಿಕಪ್ಪುರಂನ ನೂತನ ಪ್ರಧಾನ ಅರ್ಚಕರನ್ನು ಆಯ್ಕೆ ಮಾಡುವ ಹೊಣೆಯನ್ನು ಇಬ್ಬರು ಮಕ್ಕಳು ವಹಿಸಿಕೊಂಡಿದ್ದಾರೆ. ಹೌದು, ಒಂದನೇ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಈ ಇಬ್ಬರು ವಿದ್ಯಾರ್ಥಿಗಳು ಚೀಟಿ ಎತ್ತುವ ಮೂಲಕ ಅರ್ಚಕರನ್ನು ಆಯ್ಕೆ ಮಾಡಲಿದ್ದಾರೆ.
2011ರ ಸುಪ್ರೀಂಕೋರ್ಟ್‌ನ ಆದೇಶದ ಅನ್ವಯ ಮುಖ್ಯ ಅರ್ಚಕರನ್ನು ಮಕ್ಕಳು ಚೀಟಿ ಮೂಲಕ ಆಯ್ಕೆ ಮಾಡುವ ಪರಿಪಾಠವಿದೆ. ಅಂತೆಯೇ ಪಂದಳಂ ಅರಮನೆಯ ಹಿರಿಯ ಮಹಾರಾಜ ತಿರುನಾಳ್ ರಾಘವ ವರ್ಮ ಅವರು ಚೀಟಿ ಎತ್ತಲು ಕೃತಿಕೇಶ್ ವರ್ಮಾ ಮತ್ತು ಪೌರ್ಣಮಿ ವರ್ಮಾ ಎಂಬ ಇಬ್ಬರನ್ನು ಆಯ್ಕೆ ಮಾಡಿದ್ದಾರೆ.
ಕೃತಿಕೇಶ್ ವರ್ಮಾ 1ನೇ ತರಗತಿ ವಿದ್ಯಾರ್ಥಿಯಾಗಿದ್ದು, ಪಂದಳಂ ಮುಂಡಕ್ಕಲ್ ಅರಮನೆಯ ಅನೂಪ್ ವರ್ಮಾ ಮತ್ತು ಎರ್ನಾಕುಲಂನ ಮಂಗಳಾ ಮಠದ ಪಾರ್ವತಿ ವರ್ಮಾ ಅವರ ಮಗ. ಕೃತಿಕೇಶ್ ಎರ್ನಾಕುಲಂನ ಗಿರಿನಗರದ ಭವಾನ್ಸ್ ವಿದ್ಯಾಮಂದಿರದಲ್ಲಿ ಓದುತ್ತಿದ್ದಾರೆ.