ಅಲ್ವಾರ್, ರಾಜಸ್ಥಾನ: ಜಿಲ್ಲೆಯ ಕಥುಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಾ ಭಾದಿರಾ ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಜುಲೈ 19 ರಂದು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಕ್ಕಳು ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಮಕ್ಕಳ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಹೊಂಡ ತೋಡಿದ್ದ ಸಾಹಬ್ ಸಿಂಗ್ ಜುಲೈ 20ರಂದು ಪೊಲೀಸರ ಭಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಮೀನಾ ತಿಳಿಸಿದ್ದಾರೆ. ಇಬ್ಬರು ಮಕ್ಕಳನ್ನು ಲವ್ಕುಶ್ ಜಾತವ್ (ಒಂಬತ್ತು ವರ್ಷ) ಮತ್ತು ಯಶಾಂಕ್ ಜಾತವ್ (ಆರು ವರ್ಷ) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ಪ್ರತಿದಿನ ಹೊಲಗಳಲ್ಲಿ ಆಟವಾಡಲು ಹೋಗುತ್ತಿದ್ದರು. ಮಳೆಯ ಹಿನ್ನೆಲೆ ಘಟನಾ ಸ್ಥಳ ಜಾರುತ್ತಿದ್ದು, ಮಕ್ಕಳು ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ಮಕ್ಕಳು ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಗುಂಡಿಯಲ್ಲಿ ಶವಗಳು ಪತ್ತೆಯಾಗಿವೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಶವಗಳನ್ನು ಕಥುಮಾರ್ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ) ನಲ್ಲಿರುವ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಭೂಮಿ ಮಾಲೀಕ ಆತ್ಮಹತ್ಯೆ: ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಠಾಣಾಧಿಕಾರಿ ಓಂಪ್ರಕಾಶ್ ಮೀನಾ ತಿಳಿಸಿದ್ದಾರೆ. ಈ ಘಟನೆಯ ನಂತರ ಭೂ ಮಾಲೀಕ ಸಾಹಬ್ ಸಿಂಗ್ ಗುರುವಾರ ರಾತ್ರಿ ಪೊಲೀಸ್ ಆಡಳಿತದ ಕ್ರಮಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.