ಲಖಿಂಪುರ ಖೇರಿ(ಉತ್ತರ ಪ್ರದೇಶ): ಉತ್ತರ ಭಾರತದಲ್ಲಿ ದಿನದಿನಕ್ಕೂ ಚಳಿಗಾಳಿ ಹೆಚ್ಚಾಗುತ್ತಿದೆ. ಹೀಗಾಗಿ ಜನ ಅಗ್ಗಿಷ್ಟಿಕೆಗಳ ಮೊರೆ ಹೋಗ್ತಿದ್ದಾರೆ. ಈ ನಡುವೆ ಕುಟುಂಬವೊಂದಕ್ಕೆ ಮೈಕೊರೆಯುವ ಚಳಿ ಹಿನ್ನೆಲೆ ಕೋಣೆಯಲ್ಲಿ ರಾತ್ರಿ ಬೆಂಕಿ ಹಾಕಿ ನಿದ್ರೆಗೆ ಜಾರಿತ್ತು. ಈ ವೇಳೆ ಮನೆ ತುಂಬಾ ಹೊಗೆ ಆವರಿಸಿಕೊಂಡಿದೆ. ಇದರಿಂದ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಮೈಲಾನಿಯಲ್ಲಿ ನಡೆದಿದೆ. ಅನ್ಶಿಕಾ (8) ಮತ್ತು ಕೃಷ್ಣ (7) ಮೃತ ಮಕ್ಕಳಾಗಿದ್ದಾರೆ. ಇನ್ನು ಇವರ ಜತೆಯೇ ಮಲಗಿದ್ದ ಪೋಷಕರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಸ್ಥಳೀಯರು ಮನೆಯಿಂದ ಯಾರೂ ಹೊರ ಬಾರದ ಹಿನ್ನೆಲೆ ಅನುಮಾನಕೊಂಡ ಅಕ್ಕಪಕ್ಕದವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹೊರಗಿನಿಂದ ಎಷ್ಟು ಕೂಗಿದರು ಯಾರು ಸ್ಪಂದಿಸಿಲ್ಲ. ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ರಮೇಶ್ ಲೋಹರ್ (42), ಅವರ ಪತ್ನಿ ರೇಣು (40) ಮತ್ತು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಪೊಲೀಸರು ತಕ್ಷಣ ನಾಲ್ವರನ್ನು ಮೈಲಾನಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ವೈದ್ಯರು ಪರಿಶೀಲಿಸಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಪೋಷಕರ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.