ಒಡಿಶಾ :ಒಡಿಶಾ ರಾಜ್ಯದಲ್ಲಿ ಮತ್ತೆರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ನೈಜೀರಿಯಾದಿಂದ ಹಿಂದಿರುಗಿದ 41 ವರ್ಷದ ವ್ಯಕ್ತಿ ಮತ್ತು ಕತಾರ್‌ನಿಂದ ಬಂದ 43 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೈಜೀರಿಯಾದಿಂದ ಬಂದ ವ್ಯಕ್ತಿ ಜಗತ್‌ಸಿಂಗ್‌ಪುರದವರು ಮತ್ತು ಕತಾರ್‌ನಿಂದ ಬಂದವರು ಖುರ್ದಾದವರಾಗಿದ್ದಾರೆ. ಇಬ್ಬರಿಗೂ ಕೊರೊನಾ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಈ ವೇಳೆ ಅದು ಒಮಿಕ್ರಾನ್ ಎಂಬುದನ್ನು ದೃಢಪಡಿಸಲು ಅವರ ಮಾದರಿಗಳನ್ನು ಭುವನೇಶ್ವರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನಲ್ಲಿ ಜೀನೋಮಿಕ್ ಅಧ್ಯಯನಕ್ಕೆ ಕಳುಹಿಸಲಾಗಿತ್ತು.
ಈ ವೇಳೆ ವರದಿ ಒಮಿಕ್ರಾನ್ ಇರುವ ಬಗ್ಗೆ ದೃಢಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿತರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಭಯಪಡುವ ಅಗತ್ಯವಿಲ್ಲ. ಸೋಂಕಿತರ ನಿಕಟ ಸಂಪರ್ಕಿತರನ್ನೂ ಪತ್ತೆ ಹಚ್ಚಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಮಾದರಿಗಳನ್ನು ಜೀನೋಮಿಕ್ ಅಧ್ಯಯನಕ್ಕೆ ಕಳುಹಿಸಲಾಗುವುದು ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ನಿರಂಜನ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಜಿಎಸ್ಟಿಗೆ ಸೇರಿಸಲು ಶಿಫಾರಸು ಬಂದಿಲ್ಲ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ
ನವೆಂಬರ್ 1 ರಿಂದ ಈವರೆಗೆ 6,000ಕ್ಕೂ ಹೆಚ್ಚು ಜನರು ವಿದೇಶದಿಂದ ಒಡಿಶಾಗೆ ಬಂದಿದ್ದಾರೆ. ಇವರಲ್ಲಿ 7 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಅವರ ಮಾದರಿಗಳನ್ನು ಜೀನೋಮಿಕ್ ಅಧ್ಯಯನಕ್ಕಾಗಿ ಕಳುಹಿಸಲಾಗಿತ್ತು. ಇದೀಗ ಇಬ್ಬರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ಉಳಿದ 5 ಮಂದಿಯ ಮಾದರಿಗಳ ಫಲಿತಾಂಶಗಳು ಬರಬೇಕಾಗಿದೆ.