ಲಖಿಸರಾಯ್, ಬಿಹಾರ: ರಾಜ್ಯದ ಲಖಿಸರಾಯ್ ಜಿಲ್ಲೆಯಲ್ಲಿ ಛತ್ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿದ್ದಾಗ ಸ್ಥಳೀಯ ನಿವಾಸಿಯೊಬ್ಬರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ಕುಟುಂಬದ ಸದಸ್ಯರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಖಿಸರಾಯ್‌ನ ಕಬಯ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಾಬಿ ಮೊಹಲ್ಲಾದ ಛತ್ ಘಾಟ್‌ನಿಂದ ಕುಟುಂಬವು ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಶಶಿಭೂಷಣ್ ಝಾ ಅವರ ಮಗ ಚಂದನ್ ಝಾ ಮತ್ತು ರಾಜನಂದನ್ ಝಾ ಅವರನ್ನು ಮೃತರು ಎಂದು ಗುರುತಿಸಲಾಗಿದೆ. ಸ್ವತಃ ಶಶಿಭೂಷಣ್ ಝಾ, ಅವರ ಮತ್ತೊಬ್ಬ ಮಗ ದುರ್ಗಾ ಝಾ, ಸೊಸೆ ಲವ್ಲಿ ದೇವಿ, ಪತ್ನಿ ರಾಜನಂದನ್ ಝಾ ಹಾಗೂ ಕುಂದನ್ ಝಾ ಅವರ ಪತ್ನಿ ಪ್ರೀತಿ ದೇವಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಲಖಿಸರಾಯ್ ಜಿಲ್ಲಾ ಪೊಲೀಸ್ ಅಧಿಕಾರಿ ಘಟನೆಯನ್ನು ದೃಢಪಡಿಸಿದ್ದಾರೆ.
ಗಾಯಾಳುಗಳನ್ನು ಲಖಿಸರಾಯ್‌ನಲ್ಲಿರುವ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದ್ದು, ಅಲ್ಲಿಂದ ವಿಶೇಷ ಚಿಕಿತ್ಸೆಗಾಗಿ ಪಾಟ್ನಾಗೆ ಕಳುಹಿಸಲಾಗಿದೆ. ಆರೋಪಿಯನ್ನು ಕವಯ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಾಬಿ ಮೊಹಲ್ಲಾ ವಾರ್ಡ್ ಸಂಖ್ಯೆ 15 ರ ನಿವಾಸಿ ಆಶಿಶ್ ಚೌಧರಿ ಎಂದು ಪೊಲೀಸರು ಗುರುತಿಸಿದ್ದಾರೆ. ಈ ವರದಿಯನ್ನು ಸಲ್ಲಿಸುವ ಸಮಯದಲ್ಲಿ ಹತ್ಯೆಯ ಉದ್ದೇಶವೂ ಸ್ಪಷ್ಟವಾಗಿಲ್ಲ. ಘಟನೆ ನಡೆದ ಕೂಡಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮರೇಂದ್ರ ಕುಮಾರ್, ಎಸ್ಪಿ ಪಂಕಜ್ ಕುಮಾರ್, ಎಎಸ್ಪಿ ರೋಷನ್ ಕುಮಾರ್ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿ ಮಾರಣಾಂತಿಕ ದಾಳಿಯ ತನಿಖೆ ನಡೆಸಿದರು.
'ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಶಿಶ್ ಚೌಧರಿ ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಂತಿ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸುವಂತೆ ಲಖಿಸರಾಯ್ ಪೊಲೀಸರು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಏಳು ಜನರ ಹತ್ಯೆ ಪ್ರಕರಣ: ಮಾಫಿಯಾ ಬ್ರಿಜೇಶ್ ಸಿಂಗ್ಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್